ಕಾಲೇಜಿನಲ್ಲಿ ವಿದ್ಯಾರ್ಥಿಗಳ 250 ಮೊಬೈಲ್ ಜಪ್ತಿ – ಫೋನ್ ನೋಡಿ ಪೋಷಕರು ಶಾಕ್

Public TV
2 Min Read

ಕಾರವಾರ: ಕೊರೊನಾ ಬಂದ ನಂತರ ಆನ್‍ಲೈನ್ ಕ್ಲಾಸ್‍ಗಳಿಗೆ ಮಕ್ಕಳ ಕೈಗಳಲ್ಲಿ ಮೊಬೈಲ್‍ಗಳು ಬಂದು ಕುಳಿತಿವೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತೊಡಕಾಗಬಾರದು ಎಂದು ಹಲವು ಪೋಷಕರು, ಮಕ್ಕಳಿಗೆ ತಮ್ಮ ಕಷ್ಟಗಳನ್ನು ಬದಿಗೊತ್ತಿ ಮೊಬೈಲ್ ಖರೀದಿ ಮಾಡಿಕೊಟ್ಟಿದ್ದರು. ಇದೀಗ ಭೌತಿಕ ತರಗತಿ (ಆಫ್‍ಲೈನ್ ಕ್ಲಾಸ್)ಗಳು ಪ್ರಾರಂಭವಾಗಿದೆ. ಆದ್ರೆ ಈ ಮೊಬೈಲ್ ವ್ಯಾಮೋಹ ಮಾತ್ರ ಮಕ್ಕಳನ್ನು ಬಿಟ್ಟು ಹೋಗುತ್ತಿಲ್ಲ.

ಆನ್‍ಲೈನ್ ತರಗತಿಗೆ ಮಾತ್ರ ಸೀಮಿತವಾಗಿದ್ದ ಮೊಬೈಲ್ ವಿದ್ಯಾರ್ಥಿಗಳ ಕೈಯಲ್ಲಿ ಚಾಟಿಂಗ್, ಗೇಮಿಂಗ್, ಅಶ್ಲೀಲ ವೀಡಿಯೋ ವೀಕ್ಷಣೆಗೆ ಬಳಕೆಯಾಗುತ್ತಿದೆ. ಹೌದು ಇದಕ್ಕೆ ನಿದರ್ಶನ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಇಂದು ಕಾಲೇಜಿನ ಪ್ರಾಚಾರ್ಯರು ತರಗತಿ ಸಮಯದಲ್ಲಿ ವಿದ್ಯಾರ್ಥಿಗಳು ಬಳಸುತಿದ್ದ 250 ವಿವಿಧ ಕಂಪನಿಯ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದಾಗ ಹಲವು ಪೋಷಕರಿಗೆ ತಮ್ಮ ಮಕ್ಕಳ ಬಳಿ ಮೊಬೈಲ್ ಇರುವುದೇ ತಿಳಿದಿರಲಿಲ್ಲ. ಹಲವು ವಿದ್ಯಾರ್ಥಿಗಳ ಮೊಬೈಲ್‍ನಲ್ಲಿ ಗೂಗಲ್ ಹಿಸ್ಟರಿ ತೆಗೆದು ನೋಡಿದಾಗ ಅಶ್ಲೀಲ ವೀಡಿಯೋ ಸೇರಿದಂತೆ ಇತರೆ ವೀಡಿಯೋ ನೋಡಿರುವುದು ಗಮನಕ್ಕೆ ಬಂದಿದೆ. ಇನ್ನೂ ಕೆಲವರು ಮೊಬೈಲ್ ಮರಳಿ ಪಡೆಯಲು ತಮ್ಮ ಪೋಷಕರು ಎಂದು ಇತರೆ ವ್ಯಕ್ತಿಗಳನ್ನು ಕರೆತಂದು ಪ್ರಾಚಾರ್ಯರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಮಂತ್ರಿ ಆಗಿರುವವರೆಗೆ ನನ್ನ ಮಗ MLA,MLC ಆಗುವುದು ಬೇಡ: ಈಶ್ವರಪ್ಪ

ಕಾಲೇಜು ಪ್ರಾರಂಭವಾದಾಗ ಮಕ್ಕಳು ಅಧ್ಯಯನದ ಕಡೆ ಗಮನ ನೀಡದಿರುವುದು ಗಮನಕ್ಕೆ ಬಂತು. ಇತರೆ ಚಟುವಟಿಕೆಯಲ್ಲಿ ಸಹ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದರು, ಸದಾ ಮೊಬೈಲ್‍ನಲ್ಲಿ ಮಕ್ಕಳು ಕಾಲ ಕಳೆಯುವುದನ್ನು ನೋಡಿ ಅನಿವಾರ್ಯವಾಗಿ ಕಾಲೇಜಿನಲ್ಲಿ ಮಕ್ಕಳ ಮೊಬೈಲ್ ಅನ್ನು ಜಪ್ತಿ ಮಾಡಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲ ಸತೀಶ್ ನಾಯ್ಕ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪೊಲ್ಯೂಷನ್ ಲಾಕ್‍ಡೌನ್ – 1 ವಾರ ಆನ್‌ಲೈನ್‌ ಕ್ಲಾಸ್‌, ವರ್ಕ್‌ ಫ್ರಂ ಹೋಂ

ಸದ್ಯ ಮಕ್ಕಳಿಗೆ ಎಚ್ಚರಿಕೆ ನೀಡಿ ಮೊಬೈಲ್ ಅನ್ನು ಮರಳಿ ನೀಡಲಾಗಿದೆ. ಆದರೇ ಮಕ್ಕಳು ಮೊಬೈಲ್‍ಗಳನ್ನು ಅಧ್ಯಯನ ವಿಷಯಕ್ಕೆ ಹೊರತುಪಡಿಸಿ, ಇತರೆ ವಿಷಯಗಳಿಗೆ ಬಳಸುತ್ತಿರುವುದು ಮಾತ್ರ ಆತಂಕ ತರುವಂತೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *