ಧ್ವಜಕಂಬಕ್ಕೆ ವಿದ್ಯುತ್ ಶಾಕ್ – ಬೆಳ್ಳಂಬೆಳಗ್ಗೆ ಐವರು ವಿದ್ಯಾರ್ಥಿಗಳ ದುರ್ಮರಣ

Public TV
1 Min Read

ಕೊಪ್ಪಳ: ಬೆಳ್ಳಂಬೆಳಗ್ಗೆ ಧ್ವಜಕಂಬಕ್ಕೆ ವಿದ್ಯುತ್ ತಗುಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ಕೊಪ್ಪಳ ನಗರದ ಬನ್ನಿಕಟ್ಟಿ ಏರಿಯಾದಲ್ಲಿ ನಡೆದಿದೆ.

ಬಿಸಿಎಂ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ದುರಂತ ಸಂಭವಿಸಿದೆ. 10ನೇ ತರಗತಿಯ ಮಲ್ಲಿಕಾರ್ಜುನ್ ಮೆತಗಲ್, ಬಸವರಾಜ ಲಿಂಗದಳ್ಳಿ, 9ನೇ ತರಗತಿ ದೇವರಾಜ್ ಹಲಗೇರಿ, ಹೈದರನಗರದ ಕುಮಾರ್ ಮತ್ತು 8ನೇ ತಗರತಿಯ ಗಣೇಶ್ ಲಾಚನಕೇರಿ ಮೃತ ದುರ್ದೈವಿಗಳು.

ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ವೇಳೆ ಒಂದು ಕಬ್ಬಿಣದ ಪೈಪ್‍ಯನ್ನು ನೆಟ್ಟು  ಧ್ವಜಾರೋಹಣ ಮಾಡಿದ್ದರು. ಬಳಿಕ ಧ್ವಜವನ್ನು ಕೆಳಗೆ ಇಳಿಸಿದ್ದರು. ಆದರೆ ಇಂದು ಬೆಳಗ್ಗೆ ಪೈಪನ್ನು ತೆರವುಗೊಳಿಸಲು ಮೊದಲು ಒಬ್ಬ ವಿದ್ಯಾರ್ಥಿ ಹೋಗಿದ್ದಾನೆ. ಆಗ ಆತನಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಆಘಾತವಾಗಿ ಕುಸಿದುಬಿದ್ದಿದ್ದಾನೆ. ಅವನನ್ನು ಕಾಪಾಡಲು ಹೋಗಿ ಉಳಿದ ನಾಲ್ಕು ವಿದ್ಯಾರ್ಥಿಗಳಿಗೂ ವಿದ್ಯುತ್ ಸ್ಪರ್ಶವಾಗಿ ಆಘಾತವಾಗಿ ಕೂಡಲೇ ಮೃತಪಟ್ಟಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಧ್ವಜ ಕಂಬವನ್ನು ಕೆಳಗಿಳಿಸಬೇಕಿತ್ತು. ಆದರೆ ಇಂದು ವಿದ್ಯಾರ್ಥಿಗಳು ಪೈಪ್ ಇಳಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಇದು ಹಾಸ್ಟೆಲ್ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಘಟನೆ ನಡೆದ ಸ್ಥಳಕ್ಕೆ ಹಾಸ್ಟೆಲ್ ಅಧಿಕಾರಿ ಮತ್ತು ವಾರ್ಡನ್ ಬಸವರಾಜು ಬಂದಿಲ್ಲ. ವಾರ್ಡನ್ ಹಾಸ್ಟೆಲ್‍ನಲ್ಲಿ ಇರದೆ ಮನೆಗೆ ಹೋಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಯಾರು ಕಂಬ ಇಳಿಸಲು ಹೇಳಿದ್ದರು ಎಂಬ ಪ್ರಶ್ನೆ ಮೂಡಿದೆ.

ಮಾಹಿತಿ ತಿಳಿದು ಕೊಪ್ಪಳ ನಗರದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಮುಂಜಾನೆ 7 ಗಂಟೆ ನಮಗೆ ಮಾಹಿತಿ ತಿಳಿಯಿತು. ಈಗ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದೇನೆ. ಈ ಕುರಿತು ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೊಪ್ಪಳ ಡಿಸಿ ಸುನಿಲ್ ಕುಮಾರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *