ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್ ಉದಾಹರಿಸಿ ಮಕ್ಕಳಿಗೆ ಮೋದಿ ಪಾಠ

Public TV
2 Min Read

ನವದೆಹಲಿ: ಸೋಲೇ ಗೆಲುವಿನ ಸೋಪಾನ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು.

ಮೂರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಕೆಟ್ ಆಟಗಾರರು ಸೇರಿದಂತೆ ವಿವಿಧ ಸಾಧಕರ ಉದಾಹರಣೆ ನೀಡಿದ್ದು, ಜೀವನದಲ್ಲಿ ಸೋಲಿನಿಂದಲೇ ಗೆಲ್ಲಲು ಸಾಧ್ಯ. ಹೀಗಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಚಿಂತೆಗೊಳಗಾಗಬೇಡಿ ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.

ಪ್ರಧಾನಿ ನರೇಂದ್ರ ಮೋದಿಯವರು ಕ್ರಿಕೆಟ್ ಸಾಧಕರ ನಿದರ್ಶನಗಳನ್ನು ವಿವರಿಸುವ ಮೂಲಕ ಮಕ್ಕಳಲ್ಲಿ ಧೈರ್ಯ ತುಂಬಿದರು. 2001ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಪಂದ್ಯದ ಕುರಿತು ಮತನಾಡಿ, ಅನಿಲ್ ಕುಂಬ್ಳೆ ಅವರ ಉದಾಹರಣೆ ನೀಡಿದರು. ಪಂದ್ಯ ಆಡುತ್ತಿರುವ ವೇಳೆ ಕುಂಬ್ಳೆ ಗಾಯಗೊಂಡಿದ್ದರು. ಆದರೂ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ್ದರು. ನಾವು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ನಮ್ಮ ಜಯ ನಿಂತಿರುತ್ತದೆ ಎಂದು ಕಿವಿ ಮಾತು ಹೇಳಿದರು.

ರಾಹುಲ್ ಡ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಉದಾಹರಣೆಯನ್ನೂ ನೀಡಿದ ಅವರು, ನಮ್ಮ ತಂಡವು ಹಿನ್ನಡೆ ಅನುಭವಿಸುತಿತ್ತು. ಆಗ ಆಟಗಾರರ ಮನಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಪಂದ್ಯವನ್ನು ಹೇಗೆ ಗೆಲುವಿನತ್ತ ತಿರುಗಿಸಿದರು ಎಂಬುದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೇ ಸಕಾರಾತ್ಮಕ ಚಿಂತನೆ ಹಾಗೂ ಪ್ರೇರಣೆಯ ಶಕ್ತಿ ಎಂದು ಮಕ್ಕಳಿಗೆ ತಿಳಿಸಿದರು.

ಅಲ್ಲದೆ ದೇಶದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಚಂದ್ರಯಾನ-2 ವಿಫಲತೆಯ ಕುರಿತು ಸಹ ಪ್ರಧಾನಿ ಮೋದಿ ಮಾತನಾಡಿದರು. ಇದು ವಿಫಲವಾದರೆ ಏನು ಗತಿ, ಈ ಬಗ್ಗೆ ಖಚಿತತೆ ಇಲ್ಲ, ಹೀಗಾಗಿ ನೀವು ಅಲ್ಲಿಗೆ ಹೋಗದಿರುವುದೇ ಉತ್ತಮ ಎಂದು ಹಲವರು ನನಗೆ ತಿಳಿಸಿದರು. ಆದರೆ ನಾನು ಇದಕ್ಕೆ ಉತ್ತರಿಸಿ, ಅಲ್ಲಿಗೆ ಹೋಗಿಯೇ ಸಿದ್ಧ ಎಂದು ಇಸ್ರೋ ಕೇಂದ್ರಕ್ಕೆ ತೆರಳಿದೆ. ಚಂದ್ರಯಾನ-2 ವಿಫಲವಾದ್ದರಿಂದ ನನಗೂ ನೋವಾಗಿತ್ತು. ಆದರೆ ವಿಜ್ಞಾನಿಗಳ ಬಳಿ ತೆರಳಿ ಅವರಿಗೆ ಆತ್ಮಸ್ಥೈರ್ಯ ತುಂಬಿದೆ. ನನ್ನ ಭಾವನೆಗಳನ್ನು ಅವರ ಬಳಿ ಹಂಚಿಕೊಂಡೆ. ರಾಷ್ಟ್ರದ ಕನಸಿಗೆ ಅವರು ವಹಿಸಿದ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದೆ. ಆಗ ಮನಸ್ಥಿತಿ ಬದಲಾಯಿತು. ಕೇವಲ ಅಲ್ಲಿ ಮಾತ್ರವಲ್ಲ ದೇಶಾದ್ಯಂತ ಬದಲಾವಣೆಯಾಯಿತು. ನಂತರ ಏನಾಯಿತು ಎಂಬುದು ನಿಮಗೆಲ್ಲ ತಿಳಿದಿದೆ. ಕೆಲವು ಬಾರಿ ನೀವು ಸೋಲಿನಿಂದ ಕಲಿಯಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗಿರುವ ಪರೀಕ್ಷಾ ಒತ್ತಡವನ್ನು ನಿವಾರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಧಾನಿ ಮೋದಿಯವರು ಮಕ್ಕಳು ಪರೀಕ್ಷಾ ಒತ್ತಡ ನಿಭಾಯಿಸುವುದು ಹೇಗೆ ಎಂಬುದರ ಕುರಿತು ಸಲಹೆಯನ್ನು ಹಂಚಿಕೊಳ್ಳುತ್ತಿದ್ದಾರೆ.

ದೇಶಾದ್ಯಂತ ಸುಮಾರು 2 ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇದರಲ್ಲಿ 1,050 ವಿದ್ಯಾರ್ಥಿಗಳನ್ನು ಪ್ರಬಂಧ ಸ್ಪರ್ಧೆ ಮೂಲಕ ಆಯ್ಕೆ ಮಾಡಲಾಗಿದೆ. ರಾಜ್ಯದಿಂದ 42 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *