ಮಕ್ಕಳು ತಪ್ಪು ಮಾಡುವುದು ಸಹಜ, ಬಂಧಿತರನ್ನು ಬಿಡುಗಡೆ ಮಾಡಿ – ಕ್ಷಮೆ ಕೇಳಿದ ವಿದ್ಯಾರ್ಥಿಗಳು

Public TV
2 Min Read

– ಜಿಲ್ಲಾಧಿಕಾರಿ ಹೆಸರಲ್ಲಿ 2 ದಿನ ರಜೆ ಘೋಷಿಸಿದ ವಿದ್ಯಾರ್ಥಿಗಳು

ಲಕ್ನೋ: ಡಿಸೆಂಬರ್ 23 ಹಾಗೂ 24ರಂದು ರಜೆ ಘೋಷಿಸಲಾಗಿದೆ ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ನಂತರ ಕ್ಷಮೆ ಕೇಳಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವುದು ಅವರ ಸಹಪಾಠಿಗಳಿಗೆ ತಿಳಿದಿದ್ದು, ತಕ್ಷಣ ಇತರ ವಿದ್ಯಾರ್ಥಿಗಳು ಇಬ್ಬರು ಸಹಪಾಠಿಗಳ ರಕ್ಷಣೆಗೆ ಧಾವಿಸಿದ್ದಾರೆ. ನೋಯ್ಡಾ ಸೆಕ್ಟರ್ 27ರಲ್ಲಿರುವ ಜಿಲ್ಲಾಧಿಕಾರಿ ಬಿ.ಎನ್.ಸಿಂಗ್ ಅವರ ಕಚೇರಿಗೆ ಧಾವಿಸಿ ಕ್ಷಮೆಯಾಚಿಸಿ ಇಬ್ಬರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ನಮ್ರತೆಯಿಂದ ಕ್ಷಮೆಯಾಚಿಸಿದ್ದು, ಮಂಡಿಯೂರಿ ಕುಳಿತು, ಎರಡೂ ಕೈಗಳಿಂದ ಕಿವಿ ಹಿಡಿದು ಕುಳಿತುಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ.

ನಾವು ಮಕ್ಕಳು ತಪ್ಪು ಮಾಡುವುದು ಸಹಜ. ಹಿರಿಯರು ಇದನ್ನು ತಿಳಿದು ನಮ್ಮನ್ನು ಕ್ಷಮಿಸಬೇಕು ಎಂದು ನೋಯ್ಡಾ ಸೆಕ್ಟರ್ 12ರ ಶಾಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.

ಅಲ್ಲದೆ ಈ ಕುರಿತು ವಿದ್ಯಾರ್ಥಿಗಳು ಸೆಕ್ಟರ್ 20ರಲ್ಲಿ ಪೊಲೀಸ್ ಠಾಣೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಥಸಂಚಲನ ನಡೆಸಿದ್ದಾರೆ. ನಮ್ಮ ಸ್ನೇಹಿತರ ಪರವಾಗಿ ನಾವು ಕ್ಷಮೆಯಾಚಿಸುತ್ತೇವೆ. ಅವರು ತಪ್ಪು ಮಾಡಿದ್ದಾರೆ, ಆದರೆ ಈ ಕುರಿತು ಅವರಿಗೆ ಅರಿವಾಗಿದೆ. ಅವರ ಕುಟುಂಬದವರು ಸಹ ಈ ಕುರಿತು ಎಚ್ಚರಿಕೆ ವಹಿಸಿದ್ದಾರೆ. ವಿವಾದ ಸೃಷ್ಟಿಸುವುದು ಅವರ ಉದ್ದೇಶವಾಗಿರಲಿಲ್ಲ ಎಂದು 12ನೇ ತರಗತಿ ವಿದ್ಯಾರ್ಥಿ ತಿಳಿಸಿದ್ದಾನೆ.

ಈ ವೇಳೆ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಬಳಿ ಕುಳಿತುಕೊಳ್ಳದಂತೆ ತಿಳಿಸಿದ್ದಾರೆ. ಆಗ ವಿದ್ಯಾರ್ಥಿನಿ ಉತ್ತರಿಸಿ, ನಾವು ನಿಮ್ಮೊಂದಿಗೆ ವಾದ ಮಾಡುತ್ತಿಲ್ಲ. ಕೇವಲ ಕ್ಷಮೆಯಾಚಿಸಲು ಬಂದಿದ್ದೇವೆ ಅಷ್ಟೇ ಎಂದು ವಿದ್ಯಾರ್ಥಿನಿ ಅಳುತ್ತಲೇ ತಿಳಿಸಿದ್ದಾಳೆ. ಅಲ್ಲದೆ ಅವರನ್ನು ಬಿಡುಗಡೆ ಮಾಡದಿದ್ದರೆ ಅಂತಿಮ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡಬೇಕು ಎಂದು ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಸಿಂಗ್ ಪ್ರತಿಕ್ರಿಯಿಸಿ, ತಪ್ಪು ಮಾಡಿದವರು ವಿದ್ಯಾರ್ಥಿಗಳೆಂದು ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ದೂರು ದಾಖಲಿಸಲಾಗಿದೆ. ಕಾನೂನು ವಿಚಾರವಾಗಿದ್ದರಿಂದ ಎಫ್‍ಐಆರ್ ಕೂಡ ದಾಖಲಾಗಿದೆ, ತನಿಖೆ ನಡೆಯುತ್ತಿದೆ. ಎಫ್‍ಐಆರ್ ದಾಖಲಾಗಿದ್ದರಿಂದ ಹಿಂಪಡೆಯುವ ಪ್ರಶ್ನೆಯೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?
ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳಿಗೆ ಡಿಸೆಂಬರ್ 23 ಹಾಗೂ 24ರಂದು ರಜೆ ಘೋಷಿಸಲಾಗಿದೆ ಎಂಬ ಜಿಲ್ಲಾಧಿಕಾರಿ ಬಿ.ಎನ್.ಸಿಂಗ್ ನಕಲಿ ಸಹಿ ಇರುವ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ವೈರಲ್ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪತ್ರ ವೈರಲ್ ಆಗುತ್ತಿದ್ದಂತೆ, ಸಿಂಗ್ ಈ ವದಂತಿ ಕುರಿತು ಸ್ಪಷ್ಟನೆ ನೀಡಿದ್ದು, ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿಲ್ಲ, ಇಂತಹ ಯಾವುದೇ ಆದೇಶ ಹೊರಡಿಸಿಲ್ಲ. ನನ್ನ ಸಹಿ ಇರುವ ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ಇದು ನನ್ನ ಪತ್ರವಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *