ಸಹಪಾಠಿಗಳನ್ನು ರೇಪ್ ಮಾಡುವುದು ಹೇಗೆಂದು ಚರ್ಚಿಸುತ್ತಿದ್ದ ಅಪ್ರಾಪ್ತರು

Public TV
2 Min Read

– ಇನ್‍ಸ್ಟಾಗ್ರಾಮ್ ಗ್ರೂಪ್‍ನಲ್ಲಿ ಅಶ್ಲೀಲ ಚಾಟ್
– ಮಾರ್ಫಡ್ ಫೋಟೋ ಹಾಕಿ ಕಮೆಂಟ್
– ಮೂರ್ನಾಲ್ಕು ಖಾಸಗಿ ಶಾಲೆ ವಿದ್ಯಾರ್ಥಿಗಳ ಕೃತ್ಯ

ನವದೆಹಲಿ: ಅಶ್ಲೀಲ ಪೋಸ್ಟ್ ಗಳ ಗುಂಪು ಇನ್‍ಸ್ಟಾಗ್ರಾಮ್‍ನಲ್ಲಿಯೂ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದ್ದು, ಶಾಲಾ ವಿದ್ಯಾರ್ಥಿಗಳು ಈ ಗುಂಪಿನಲ್ಲಿ ಅಶ್ಲೀಲ ಹಾಗೂ ಮಾರ್ಫಡ್ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ತಮ್ಮ ಸಹಪಾಠಿಗಳನ್ನು ರೇಪ್ ಮಾಡುವುದು ಹೇಗೆ ಎಂಬ ಕುರಿತು ಸಹ ಚರ್ಚಿಸುತ್ತಿದ್ದರು ಎಂಬ ಭಯಾನಕ ಮಾಹಿತಿ ಲಭ್ಯವಾಗಿದೆ.

ದೆಹಲಿ ಪೊಲೀಸರು ಈ ಪ್ರಕರಣ ಪತ್ತೆ ಹಚ್ಚಿದ್ದು, ಶಾಲಾ ವಿದ್ಯಾರ್ಥಿಗಳು ಸಹ ಈ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಭಯಾನಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇವರು ಬೋಯಿಸ್ ಲಾಕರ್ ರೂಮ್ ಎಂಬ ಹೆಸರಿನ ಗ್ರೂಪ್ ಮೂಲಕ ಹುಡುಗಿಯರ ಪೋಸ್ಟ್‍ಗಳಿಗೆ ಅಶ್ಲೀಲ ಕಮೆಂಟ್ ಮಾಡುವುದು ಹಾಗೂ ಅಶ್ಲೀಲ ಚಿತ್ರಗಳನ್ನು ಗುಂಪಿನಲ್ಲಿ ಹಂಚಿಕೊಳ್ಳುವುದನ್ನು ಮಾಡುತ್ತಿದ್ದರು ಎಂದು ಸೈಬರ್ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಉನ್ನತ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲು ಸೂಚಿಸಿದ್ದಾರೆ. ಐಪಿಸಿ ಸೆಕ್ಷನ್ 469(ನಕಲಿ), 471(ನಕಲಿ ದಾಖಲೆಗಳನ್ನು ನಿಜವೆಂಬಂತೆ ಬಿಂಬಿಸುವುದು ಅಥವಾ ಎಲೆಕ್ಟ್ರಾನಿಕ್ ದಾಖಲೆ ಸೃಷ್ಟಿ) 469(ನಕಲಿ ದಾಖಲೆ ಮೂಲಕ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವುದು), 509(ಮಹಿಳೆಯರನ್ನು ಅವಮಾನಿಸುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ. ಮಾತ್ರವಲ್ಲದೆ ಐಟಿ ಕಾಯ್ದೆಯ ಸೆಕ್ಷನ್ 67(ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲತೆ ಸೃಷ್ಟಿಸುವುದು) 67ಎ(ಲೈಂಗಿಕ ಹಾಗೂ ಅಶ್ಲೀಲ ವಿಡಿಯೋಗಳನ್ನು ಬಿತ್ತರಿಸುವುದು) ಅಡಿ ಎಫ್‍ಐಆರ್ ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆ ವೇಳೆ ದಕ್ಷಿಣ ದೆಹಲಿಯ ಮೂರು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ತೊಡಗಿರುವುದು ಬಹಿರಂಗವಾಗಿದ್ದು, ಮಾರ್ಫಡ್ ಫೋಟೋಗಳನ್ನು ಚಾಟ್ ಮಾಡಿರುವುದು ತಿಳಿದಿದೆ. ಮಾರ್ಫಡ್ ಫೋಟೋ ಚಾಟ್ ಮಾಡಿರುವುದು ಅಲ್ಲದೆ, ಮಹಿಳೆಯರ ಪೋಸ್ಟ್‍ಗಳಿಗೆ ಅಶ್ಲೀಲವಾಗಿ ಕಮೆಂಟ್ ಮಾಡುವುದು ಅಸಭ್ಯ ಚಾಟ್ ಮಡುತ್ತಿದ್ದು ತನಿಖೆ ವೇಳೆ ಬಹಿರಂಗವಾಗಿದೆ.

ಇನ್‍ಸ್ಟಾಗ್ರಾಮ್ ಚಾಟ್‍ಗೆ ಸಂಬಂಧಿಸಿದಂತೆ ಭಾರತದಲ್ಲಿ ಎಫ್‍ಐಆರ್ ದಾಖಲಾಗಿರುವುದು ಇದೇ ಮೊದಲು. ನಿನ್ನೆಯಷ್ಟೇ ದಕ್ಷಿಣ ದೆಹಲಿ ಖಾಸಗಿ ಶಾಲೆಯ ಆಡಳಿತ ಮಂಡಳಿ ಸಾಕೆತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಈ ವೇಳೆ ವಿದ್ಯಾರ್ಥಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ಅಶ್ಲೀಲವಾಗಿ ಚಾಟ್ ಮಾಡುವುದರ ಕುರಿತು ತಿಳಿಸಿತ್ತು.

ದೂರು ನೀಡುತ್ತಿದ್ದಂತೆ ದೆಹಲಿ ಪೊಲೀಸ್ ಸೈಬರ್ ವಿಭಾಗ ಕಾರ್ಯಪ್ರವೃತ್ತವಾಗಿದ್ದು, ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಅಶ್ಲೀಲ ಚಾಟ್ ಮಾಡಿದ್ದ ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಈ ವಾರ ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ದೆಹಲಿ ಸೈಬರ್ ವಿಂಗ್ ಇನ್‍ಸ್ಟಾಗ್ರಾಮ್ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದು, ಬಾಯ್ಸ್ ಲಾಕರ್ ರೂಮ್ ಎಂಬ ಗ್ರೂಪ್ ಕುರಿತು ಮಾಹಿತಿ ನೀಡಿದ್ದಾರೆ. ಅಪ್ರಾಪ್ತರ ಕುರಿತು ಅಶ್ಲೀಲವಾಗಿ ಚಾಟ್ ಮಾಡುವುದು ಹಾಗೂ ರೇಪ್ ಗಳಂತಹ ಕಾನೂನು ಬಾಹಿರ ಚಟುವಟಿಕೆ ನಡೆಸುವ ಕುರಿತು ಚಾಟ್ ಮಾಡುತ್ತಿದ್ದರು ಎಂದು ತಿಳಿಸಿದೆ.

ಈ ಅಸಹ್ಯಕರ ಚಾಟ್‍ನ ಸ್ಕ್ರೀನ್ ಶಾಟ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 15-16 ವರ್ಷದ ಬಾಲಕರು ಹಾಗೂ ಸಹಪಾಠಿಗಳ ಮೇಲೆ ಅತ್ಯಾಚಾರ ಎಸಗುವ ಕುರಿತು ಚರ್ಚೆ ನಡೆಸಿದ್ದರು. ಬಾಲಕರು ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡರೆ, ಹಲವರು ಇದಕ್ಕೆ ಕಮೆಂಟ್ ಮಾಡುತ್ತಿದ್ದರು ಎಂದು ಸೈಬರ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *