ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

Public TV
1 Min Read

ಚಿಕ್ಕಮಗಳೂರು: ನಗರದ ಎಸ್‍ಟಿಜೆ ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಸೋಮವಾರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕೃಷ್ಣ ಜನ್ಮಾಷ್ಟಮಿ, ಹುತ್ತರಿ ಹಬ್ಬಗಳ ಸಂಭ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ವೀರಗಾಸೆ, ಜನಪದ ಕಲಾ ತಂಡಗಳ ನೇತೃತ್ವದಲ್ಲಿ ನವದುರ್ಗಿಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಚೂಢ, ಕುಷ್ಮಾಂದ, ಸ್ಕಂದಮಾತ, ಕಾತ್ಯಾಯಿನಿ, ಸರಸ್ವತಿ, ದುರ್ಗಾಮಾತೆ, ಸಿದ್ಧಿಧತ್ರಿ ದೇವಿಗಳ ಮೆರವಣಿಗೆ ಮಾಡಿದ ವಿದ್ಯಾರ್ಥಿನಿಯರು ಖುಷಿಯ ಅಲೆಯಲ್ಲಿ ತೇಲಿದರು. ನಂತರ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ದಸರಾ ಹಬ್ಬಕ್ಕೆ ಮುನ್ನುಡಿ ಬರೆದ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಿ ಗಮನ ಸೆಳೆದರು. ಆವರಣದಲ್ಲಿ ವಿಶೇಷವಾಗಿ ರಚಿಸಿದ್ದ ಹೂವಿನ ಅಲಂಕಾರವುಳ್ಳ ರಂಗೋಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ಶ್ರೀಕೃಷ್ಣನ ಹತ್ತು ಅವತಾರ ಬಿಂಬಿಸುವ ವೇಷದೊಂದಿಗೆ ನರ್ತಿಸಿ ಕೃಷ್ಣಾಷ್ಟಮಿ ನೆನಪಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರು ಕೊಡಗಿನ ಹುತ್ತರಿ ಹಬ್ಬ, ಕಾವೇರಮ್ಮ ಮತ್ತು ಈಶ್ವರನ ಪೂಜೆ, ಭತ್ತದ ಗದ್ದೆಯಲ್ಲಿ ಸುಗ್ಗಿಯೊಂದಿಗೆ ಕೊಡವರ ಸಾಂಪ್ರದಾಯಿಕ ಕುಣಿತವನ್ನ ಪ್ರದರ್ಶಿಸಿದ್ರು. ಅಂತಿಮ ಬಿ.ಕಾಂ ತಂಡ ಕುಡ್ಲದ ಪರ್ಬಕೋಲ ಪೂಜೆಯೊಂದಿಗೆ ಕೋಲ ಕಟ್ಟಿ ಕುಣಿದರು.

ಗಾಯಕಿ ರೇಖಾ ಪ್ರೇಮ್‍ಕುಮಾರ್ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯೆ ಪ್ರೊ.ಜೆ.ಕೆ.ಭಾರತಿ, ಕಾಲೇಜು ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಶೇಖರ್, ವಿದ್ಯಾರ್ಥಿನಿ ಪ್ರತಿನಿಧಿಗಳಾದ ಗೀತಾ, ಸುಷ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *