ಹೆತ್ತಮ್ಮನ ಅಗಲಿಕೆ ನೋವಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ – ಬಳಿಕ ಅಂತ್ಯಕ್ರಿಯೆಯಲ್ಲಿ ಭಾಗಿ

Public TV
1 Min Read

ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಯೊಬ್ಬ ತಾಯಿಯ ಅಗಲಿಕೆ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ (SSLC Exam) ಬಂದಿದ್ದಾನೆ.

ಗ್ರಾಮದ ಸ್ವಾಮಿ ವಿವೇಕಾನಂದ ಇಂಗ್ಲಿಷ್​ ಮೀಡಿಯಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಡಿವೆಯ್ಯ ಸ್ವಾಮಿ ಎಂಬ 10ನೇ ತರಗತಿಯ ವಿದ್ಯಾರ್ಥಿಯ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ (38) ಇಂದು ಬೆಳಗಿನ ಸಮಯದಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯ ಸುದ್ದಿಯ ಮಧ್ಯೆಯೂ ಧೃತಿಗೆಡದ ವಿದ್ಯಾರ್ಥಿ ತನ್ನ ಕುಟುಂಬದವರ ಮನವೊಲಿಸಿ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದಾನೆ.

ಮಾನವೀಯತೆ ಮೆರೆದ ಶಿಕ್ಷಕರು
ನೋವಿನಲ್ಲಿದ್ದ ವಿದ್ಯಾರ್ಥಿ ಅಡಿವೆಯ್ಯ ಸ್ವಾಮಿ ಮನೆಗೆ ಬಂದ ಶಿಕ್ಷಕರು ಸಾಂತ್ವಾನ ಹೇಳಿದರು. ಬಳಿಕ ಪರೀಕ್ಷಾ ಕೇಂದ್ರದವರೆಗೆ ಕರೆದೊಯ್ಯಲು ನೆರವಾದರು. ಪರೀಕ್ಷೆಯ ಬಳಿಕ ವಿದ್ಯಾರ್ಥಿ ತನ್ನ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದನು.

ವಿದ್ಯಾರ್ಥಿ ತಾಯಿ ವಿಜಯಲಕ್ಷ್ಮಿ ಕಳೆದ ಕೆಲ ದಿನಗಳ ಹಿಂದೆ ಸ್ನಾನದ ಕೋಣೆಯಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ಪರಿಣಾಮ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article