93.5% ಮಾರ್ಕ್ಸ್‌ ನೋಡಿ ಮೂರ್ಛೆ ಬಿದ್ದ 10ನೇ ತರಗತಿ ವಿದ್ಯಾರ್ಥಿ- ಐಸಿಯುಗೆ ದಾಖಲು

Public TV
1 Min Read

ಲಕ್ನೋ: ಉತ್ತರ ಪ್ರದೇಶದ ಮೀರತ್‌ನಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ 10 ನೇ ತರಗತಿಯ ಫಲಿತಾಂಶವನ್ನು ನೋಡಿ ಕುಸಿದು ಬಿದ್ದ ಪ್ರಸಂಗವೊಂದು ನಡೆದಿದೆ.

ಮೀರತ್‌ನ ಮೋದಿಪುರಂನ ಮಹರ್ಷಿ ದಯಾನಂದ ಇಂಟರ್ ಕಾಲೇಜಿನ ವಿದ್ಯಾರ್ಥಿ ಅಂಶುಲ್ ಕುಮಾರ್ 93.5% ಅಂಕ ಗಳಿಸಿದ್ದಾನೆ. ಫಲಿತಾಂಶ ನೋಡಿ ಅಂಶುಲ್‌ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾನೆ. ಆದರೆ ಆತನ ಖುಷಿ ಕೆಲವೇ ಕ್ಷಣ ಆಗಿತ್ತು. ಖುಷಿಯ ಬೆನ್ನಲ್ಲೇ ಆತ ಏಕಾಏಕಿ ಕುಸಿದುಬಿದ್ದಿದ್ದಾನೆ.

ಮಗ ಕುಸಿದು ಬಿದ್ದಿದ್ದನ್ನು ಕಂಡು ಕುಟುಂಬ ಕೂಡ ಗಾಬರಿಯಾಯಿತು. ನೀರು ಕೊಟ್ಟರೂ ಮಗ ಸುಧಾರಿಸಿಕೊಳ್ಳಲಿಲ್ಲ. ಪರಿಣಾಮ ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ವೈದ್ಯರು ಆತನನ್ನು ಐಸಿಯುಗೆ ದಾಖಲಿಸಿದರು. ಇದನ್ನೂ ಓದಿ: ಸುಪ್ರೀಂ ಚಾಟಿ ಬೆನ್ನಲ್ಲೇ ದೊಡ್ಡ ಗಾತ್ರದಲ್ಲಿ ಪ್ರಕಟಿಸಿ ಕ್ಷಮೆ ಕೋರಿದ ಪತಂಜಲಿ

ಅಂಶುಲ್‌ ತಂದೆ ಪೋಸ್ಟ್ ಆಫೀಸ್‌ನಲ್ಲಿ ಗುತ್ತಿಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಐಸಿಯುಗೆ ದಾಖಲಾದ ನಂತರ ವಿದ್ಯಾರ್ಥಿ ಆರೋಗ್ಯ ಸ್ಥಿರಗೊಂಡಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಂಶುಲ್ ಅವರ ಸೋದರ ಸಂಬಂಧಿ ಪುಷ್ಪೇಂದ್ರ ಹೇಳಿದ್ದಾರೆ.

ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್ (UPMSP) ಇತ್ತೀಚೆಗೆ UP ಬೋರ್ಡ್ 10 ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಪ್ರಕಟಿಸಿದೆ. 10ನೇ ತರಗತಿಯ ವಿದ್ಯಾರ್ಥಿಗಳ ಉತ್ತೀರ್ಣ 89.55% ರಷ್ಟಿದ್ದು, ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

Share This Article