ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನಲ್ಲಿ ಹಿಜಬ್‌ ಧರಿಸಲು ಅವಕಾಶವಿಲ್ಲ: ಕೇರಳ ಸರ್ಕಾರ

By
2 Min Read

ತಿರುವನಂತಪುರಂ: ಸ್ಟೂಡೆಂಟ್ ಪೊಲೀಸ್ ಕೆಡೆಟ್(ಎಸ್‌ಪಿಸಿ) ಯೋಜನೆಯಲ್ಲಿ ಹಿಜಬ್ (ತಲೆ ಸ್ಕಾರ್ಫ್) ಮತ್ತು ಪೂರ್ಣ ತೋಳಿನ ಉಡುಪನ್ನು ಧರಿಸಲು ಅವಕಾಶ ನೀಡುವುದಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಎಸ್‌ಪಿಸಿ ಯೋಜನೆಯಲ್ಲಿ ಹಿಜಬ್‌ ಮತ್ತು ಪೂರ್ಣ ತೋಳಿನ ಉಡುಪನ್ನು ಧರಿಸಲು ಅನುಮತಿ ನೀಡುವಂತೆ ಕೋರಿ ಮುಸ್ಲಿಮ್‌ ವಿದ್ಯಾರ್ಥಿನಿಯೊಬ್ಬಳು ಕೇರಳ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಮನವಿಯನ್ನು ಮಾನ್ಯ ಮಾಡಿದರೆ ಎಸ್‌ಪಿಸಿಯ ಜಾತ್ಯಾತೀತ ನಿಲುವಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

ಎಸ್‌ಪಿಸಿ ಯೋಜನೆಯೂ ಶಾಲಾ-ಆಧಾರಿತ ಯುವ ಅಭಿವೃದ್ಧಿ ಉಪಕ್ರಮವಾಗಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಕಾನೂನು, ಶಿಸ್ತು, ನಾಗರಿಕ ಪ್ರಜ್ಞೆ, ಸಮಾಜದ ದುರ್ಬಲ ವರ್ಗಗಳ ಬಗ್ಗೆ ಸಹಾನುಭೂತಿ ಮೂಡಿಸುವ ಮೂಡಿಸಿ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ತರಬೇತಿ ನೀಡಲಾಗುತ್ತದೆ. ಇದನ್ನೂ ಓದಿ: ಆನ್‍ಲೈನ್ ಎಂಬ ತಾರತಮ್ಯದ ಕ್ಲಾಸ್ ಬೇಡ – ಹಿಜಬ್ ಹಾಕಿಯೇ ಕ್ಲಾಸಿಗೆ ಹೋಗುತ್ತೇವೆ

ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯ ಸಮವಸ್ತ್ರದಲ್ಲಿ ಪ್ರತ್ಯೇಕತೆ ತರುವುದು ಸರಿಯಲ್ಲ. ಈ ಸಮವಸ್ತ್ರವನ್ನು ಧರಿಸಲು ಇಷ್ಟವಿಲ್ಲದವರು ಎಸ್‌ಪಿಸಿಯನ್ನು ಸೇರಬಾರದು. ಎಸ್‌ಪಿಸಿಗೆ ಸೇರಿದ ಬಳಿಕ ಈಗಾಗಲೇ ಸಿದ್ಧಪಡಿಸಲಾಗಿರುವ ಸಮವಸ್ತ್ರವನ್ನು ಧರಿಸಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಸಮವಸ್ತ್ರದೊಂದಿಗೆ ಧಾರ್ಮಿಕ ವಿಷಯಗಳನ್ನು ಸಂಯೋಜಿಸಿದರೆ ಮುಂದೆ ಇದೇ ರೀತಿಯ ಬೇಡಿಕೆ ಬೇರೆ ವಿಭಾಗಗಳಲ್ಲಿಯೂ ಬರಬಹುದು. ಇದರಿಂದಾಗಿ ಜಾತ್ಯಾತೀತ ತತ್ವಕ್ಕೆ ಭಂಗವಾಗುತ್ತದೆ ಎಂದು ಎಂದು ಕೇರಳ ಗೃಹ ಸಚಿವಾಲಯ ತನ್ನ ಆದೇಶದಲ್ಲಿ ಹೇಳಿದೆ.

ಪ್ರಸ್ತುತ ಕೇರಳದ ಎಲ್ಲಾ ಪೊಲೀಸ್ ಸಿಬ್ಬಂದಿ ಒಂದೇ ಸಮವಸ್ತ್ರವನ್ನು ಧರಿಸುತ್ತಾರೆ ಮತ್ತು ಸಮವಸ್ತ್ರದಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳ ಬಳಕೆಗೆ ಅನುಮತಿಯಿಲ್ಲ. ಎಸ್‌ಪಿಸಿಗೂ ಇದೇ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಇಂದು ಹಿಜಬ್, ನಾಳೆ ಷರಿಯತ್ ಕಾನೂನು – ಉಡುಪಿ ಹಿಂದೂ ಜಾಗರಣಾ ವೇದಿಕೆ ಗರಂ

ಏನಿದು ಪ್ರಕರಣ?
8ನೇ ತರಗತಿ ಓದುತ್ತಿರುವ ಮುಸ್ಲಿಮ್‌ ವಿದ್ಯಾರ್ಥಿನಿಯೊಬ್ಬಳು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯಲ್ಲಿರುವ ಸಮವಸ್ತ್ರದಲ್ಲಿ ಹಿಜಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಳು. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ತಲೆ ಸ್ಕಾರ್ಫ್ ಮತ್ತು ಫುಲ್ ಸ್ಲೀವ್ ಡ್ರೆಸ್ ಧರಿಸಲು ಅನುಮತಿ ಇಲ್ಲ ಎಂದು ಎಸ್‌ಪಿಸಿ ಅಧ್ಯಾಪಕರು ತಿಳಿಸಿದ್ದರಿಂದ ವಿದ್ಯಾರ್ಥಿಯು ನ್ಯಾಯಾಲಯದ ಮೊರೆ ಹೋಗಿದ್ದಳು. ಈ ಅರ್ಜಿಯನ್ನು ವಜಾಗೊಳಿಸಿದ್ದ ಕೋರ್ಟ್‌ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *