ಶಾಲೆಯಲ್ಲಿ ವಿತರಿಸಿದ ಮಾತ್ರೆ ಸೇವಿಸಿ 35 ವಿದ್ಯಾರ್ಥಿಗಳು ಅಸ್ವಸ್ಥ

Public TV
2 Min Read

ತುಮಕೂರು: ಶಾಲೆಯಲ್ಲಿ ವಿತರಿಸಿದ ಐರನ್ ಕಂಟೆಂಟ್ ಮಾತ್ರೆ ಸೇವಿಸಿದ 35 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಎಸ್. ಕೊಡಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಡಿಗೆಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ‘ಐರನ್ ಆಂಡ್ ಫಾಲಿಕ್ ಆಸಿಡ್’ ಹೆಸರಿನ ಮಾತ್ರೆಯನ್ನು ಇಂದು ಬೆಳಗ್ಗೆ ಸರ್ಕಾರಿ ಆಸ್ಪತ್ರೆಯಿಂದ ತಂದು ವಿತರಣೆ ಮಾಡಲಾಗಿತ್ತು. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಉಚಿತವಾಗಿ ನೀಡಿರುವ ಈ ಮಾತ್ರೆ 2018ರ ಆಗಸ್ಟ್ ನಲ್ಲಿ ತಯಾರಾಗಿದ್ದು, 2020 ಜುಲೈವರೆಗೆ ಬಳಸಬಹುದಾಗಿದೆ.

ಈ ಮಾತ್ರೆ ನುಂಗಿದ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಮಾತ್ರೆ ಸೇವಿಸಿದ ಕೆಲ ಸಮಯದ ನಂತರ ವಿದ್ಯಾರ್ಥಿಗಳಿಗೆ ತಲೆ ಸುತ್ತುವುದು, ವಾಂತಿ ಶುರುವಾಗಿ ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳುತ್ತಿದ್ದಂತೆ ಗ್ರಾಮಸ್ಥರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ರಿಯಾಕ್ಷನ್ ಆಗಿ 15 ಮಂದಿ ರೋಗಿಗಳು ಕಣ್ಣು ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಜುಲೈ 15ರಂದು ಕಣ್ಣಿನ ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳು ಕಣ್ಣು ಕಳೆದುಕೊಂಡಿರುವ ಘಟನೆ ನಗರದ ಮಿಂಟೋ ಆಸ್ಪತ್ರೆಯಲ್ಲಿ ನಡೆದಿತ್ತು.

25 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿತ್ತು. ಅದರಲ್ಲಿ 15 ಜನರಿಗೆ ಕಣ್ಣು ಕಾಣುತ್ತಿಲ್ಲ, 5 ಮಂದಿಗೆ ಸ್ವಲ್ಪ ಚೇತರಿಕೆ ಕಂಡಿದೆ. ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು.

ಅವಾಂತರದ ಕುರಿತು ಮಿಂಟೊ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ಪ್ರತಿಕ್ರಿಯಿಸಿ, ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾಗ ನಾನು ರಜೆಯಲ್ಲಿದ್ದೆ. ನಮ್ಮ ಸರ್ಜಿಕಲ್ ಟೀಮ್ ಚಿಕಿತ್ಸೆ ನೀಡಿದೆ. ಸೋಮವಾರ 24ಕ್ಕೂ ರೋಗಿಗಳಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಮಂಗಳವಾರ ಬೆಳಗ್ಗೆ ರೋಗಿಗಳ ಕಣ್ಣಿನ ಪಟ್ಟಿ ಬಿಚ್ಚಿದಾಗ ರಿಯಾಕ್ಷನ್ ಆಗಿರುವುದು ಕಂಡಬಂದಿದೆ. ಮೇಲ್ನೋಟಕ್ಕೆ ಹೈ ಡ್ರಗ್ ರಿಯಾಕ್ಷನ್‍ನಿಂದ ಅವಾಂತರ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದರು.

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಬಳಸಿದ ಔಷಧ ದುಷ್ಪರಿಣಾಮದಿಂದ ರಿಯಾಕ್ಷನ್ ಆಗಿ ಈ ಫಲಿತಾಂಶ ಬಂದಿದೆ ಎಂದು ಆಸ್ಪತ್ರೆ ವರದಿಯಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಮುಂದಿನ ಆದೇಶ ಬರುವವರೆಗೂ ಅಕ್ಯೂಜೆಲ್ ಆಫ್ತಮಾಲಿಕ್ ವಿಸಿಯೋಸರ್ಜಿಕಲ್ ಡಿವೈಸ್ ಬ್ಯಾಚ್ ನಂ ಒಯುವಿ 1990203 ಔಷಧವನ್ನು ಬಳಸಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *