ಚಿಕ್ಕಮಗಳೂರು: ಸಾಮಾಜಿಕ – ಶೈಕ್ಷಣಿಕ ಸರ್ವೇ (Caste Survey) ಕಾರ್ಯಕ್ಕೆ ತೆರಳಿದ್ದ ಶಿಕ್ಷಕನ ಮೇಲೆ ಬೀದಿ ನಾಯಿ (Stray Dog) ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಶಿಕ್ಷಕ ಕೃಷ್ಣಪ್ಪ (54) ಅವರ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ನಾಯಿ ದಾಳಿಯಿಂದ ಅವರ ಕಾಲಿನ ಭಾಗಕ್ಕೆ ಭಾರೀ ಹಾನಿಯಾಗಿದೆ. ನಾಯಿಯ ಹಲ್ಲು ಸುಮಾರು ಒಂದು ಇಂಚು ಆಳಕ್ಕೆ ನಾಟಿದೆ. ಅವರಿಗೆ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಜಾತಿಗಣತಿಗೆ ತರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳ ದಾಳಿ – ರಕ್ಷಣೆಗೆ ಬಂದ 7 ಮಂದಿಗೂ ಕಚ್ಚಿದ ಶ್ವಾನಗಳು
ಸರ್ವೇ ಕಾರ್ಯದ ಭಾಗವಾಗಿ ಕೆಲ ಮನೆಗಳಲ್ಲಿನ ಯು.ಹೆಚ್.ಐ.ಡಿ. ನಂಬರ್ ಪೆಂಡಿಂಗ್ ತೋರಿಸುತ್ತಿತ್ತು. ಈ ಕಾರಣಕ್ಕೆ ಮೀಟರ್ ಬೋರ್ಡಿನಲ್ಲಿರುವ ಆರ್.ಆರ್ ನಂಬರ್ ಪಡೆಯಲು ಕೃಷ್ಣಪ್ಪ ಅವರು ತೆರಳಿದ್ದರು. ಈ ಸಂದರ್ಭದಲ್ಲಿ ನಾಯಿ ದಾಳಿ ನಡೆಸಿದೆ.
ಕೃಷ್ಣಪ್ಪ ಅವರ ಪರವಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಕೆಲ ಶಿಕ್ಷಕರು, ಸರ್ವೇಯಲ್ಲಿನ ತಾಂತ್ರಿಕ ಅಡಚಣೆಗಳೇ ನಾಯಿ ದಾಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳು ಮತ್ತು ಸುರಕ್ಷತಾ ಕೊರತೆಯಿಂದಾಗಿ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರ | ಜಾತಿಗಣತಿಗೆ ತೆರಳುವಾಗ ನಾಯಿಗೆ ಸ್ಕೂಟರ್ ಡಿಕ್ಕಿ – ಶಿಕ್ಷಕಿಗೆ ಗಂಭೀರ ಗಾಯ