-ಬಂಡೆ ಬಂಡೆಯಾಗಿಯೇ ಉಳಿಯುತ್ತೆ
ತುಮಕೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಶ್ರೀ ಮಠದ ಭಕ್ತ, ಇಲ್ಲಿನ ಮಗ, ಅವನಿಗೆ ಶ್ರೀಮಠದ ಪರಿಪೂರ್ಣವಾದ ಆಶೀರ್ವಾದ ಇದೆ. ಕಲ್ಲು ಕಲ್ಲಾಗಿಯೇ ಇರುತ್ತೆ ಹೊರತು ಕಟ್ಟಿಗೆ ಆಗಲ್ಲ ಎಂದು ನೋಣವಿನಕೆರೆಯಲ್ಲಿ ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ಹೇಳಿದ್ದಾರೆ.
ನೋಣವಿನಕೆರೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ಡಿಕೆಶಿಗೆ ಶ್ರೀಮಠದ ಪರಿಪೂರ್ಣವಾದ ಆಶೀರ್ವಾದ ಇದೆ. ಅವನು ಆರೋಪ ಮುಕ್ತನಾಗಿ ಹೊರ ಬರುತ್ತಾನೆ. ಕಲ್ಲು ಕಲ್ಲಾಗಿಯೇ ಇರುತ್ತೆ ಹೊರತು ಕಟ್ಟಿಗೆ ಆಗಲ್ಲ ಎಂದು ಕನಕಪುರ ಬಂಡೆಗೆ ಬೆಂಬಲಿಸಿದರು.
ಶ್ರೀ ಮಠದ ಭಕ್ತ, ಮಗನಾದ ಡಿಕೆಶಿ ಇವತ್ತು ಮಠಕ್ಕೆ ಬರ್ತಿದ್ದಾನೆ. ಅವರದ್ದು ಪ್ರಾರಬ್ಧ ದೋಷ. ನಡೆಯುವವರೇ ಎಡವುತ್ತಾರೇ ಹೊರತು ಕುಳಿತುಕೊಂಡವರು ಎಡವಲ್ಲ. ಹಾಗೆಯೇ ಡಿಕೆಶಿ ಕೂಡ ಎಡವಿದ್ದಾನೆ. ಆದರೂ ಬಂಡೆ ಬಂಡೆಯಾಗಿಯೇ ಉಳಿಯಲಿದ್ದಾನೆ ಎಂದರು. 57 ದಿನಗಳ ಬಳಿಕ ದಿಲ್ಲಿಯ ಕಾರಾಗೃಹದಿಂದ ಹೊರಬಂದಿದ್ದಾರೆ. ಹಾಗೆಯೇ ಇಂದು ಶ್ರೀಮಠದ ಕರ್ತೃ ಗದ್ದುಗೆಗೆ ನಮಿಸಿ ಆಶಿರ್ವಾದ ಪಡೆಯಲಿದ್ದಾನೆ ಎಂದರು.
ಮಣ್ಣು, ನೀರು, ಗಾಳಿ, ಬೆಳಕು ಪಡೆಯೋದು ಮನುಷ್ಯನ ವಯೋಗುಣಧರ್ಮ. ಇನ್ನೂ ಆಸೆ ಬೇಕು, ಬೇಕು ಅನ್ನೋ ದೃಷ್ಟಿಯಿಂದ ಸಾಧಕನಾಗಿ ಅವನೊಂದು ಆಶೋತ್ರವನ್ನ ಇಟ್ಕೊಂಡು ಮಾಡಿದ್ದಾನೆ. ಯಾರೂ ಮಾಡ್ದೇ ಇರುವಂಥಾದ್ದೇನಲ್ಲ. ಡಿಕೆಶಿ ಕಾನೂನು ಚೌಕಟ್ಟಿಗೆ ತಲೆಬಾಗಿ ವ್ಯವಸ್ಥೆಯಲ್ಲಿ ಮನನೊಂದು, ಸಾಧನೆಯ ಸನ್ನಿವೇಶವನ್ನ ಹೇಳಿಕೊಂಡಿದ್ದಾನೆ. ಒಡೆದ ಬಂಡೆಯಾದರೂ ಸಹ ಆ ಬಂಡೆ ಶಾಶ್ವತವಾಗಿ ಧೈರ್ಯ ಸಾಹಸದಿಂದ ಮುಂದಿನ ಆಗುಹೋಗುಗಳನ್ನ ಎದರಿಸುತ್ತದೆ. ಹಾಗೆಯೇ ಡಿಕೆಶಿ ಆರೋಪ ಮುಕ್ತನಾಗುತ್ತಾನೆ ಎಂದು ಆಶೀರ್ವದಿಸಿದರು.