ಮಂಡ್ಯ: ಗಣೇಶ ಮೆರವಣಿಗೆ (Ganesh Procession) ವೇಳೆ ಕಲ್ಲುತೂರಾಟ ನಡೆಸಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆವರೆಗೆ ಮದ್ದೂರು (Madduru) ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಘಟನಾ ನಡೆದ ಸ್ಥಳಕ್ಕೆ ರಾತ್ರಿಯೇ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಆಗಮಿಸಿ ರೌಂಡ್ ಹಾಕಿದರು. ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಂಗಳವಾರ ಬೆಳಗ್ಗೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ
ತಮಿಳು ಕಾಲೋನಿಯ ಯುವಕರು ಗಣೇಶ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲು ಮೆರವಣಿಗೆ ಮಾಡಿದ್ದಾರೆ. ರಾಮ್ ರಹೀಮ್ ನಗರದಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಕಲ್ಲು ಬಿದ್ದಿದೆ. ನಂತರ ಎರಡೂ ಕಡೆಯಿಂದ ಕಲ್ಲು ತೂರಾಟ ಆಗಿದೆ. ಲೈಟ್ ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಂಬಂಧ ಒಂದು ಸ್ವಯಂಪ್ರೇರಿತ ಇನ್ನೊಂದು ಅಜಯ್ ಎಂಬ ಗಾಯಾಳು ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದೇವೆ. 21 ಜನರನ್ನು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆದವರ ಪೈಕಿ ಇಬ್ಬರು ಮಾತ್ರ ಚನ್ನಪಟ್ಟಣದವರು ಉಳಿದವರು ಸ್ಥಳೀಯರಾಗಿದ್ದಾರೆ. ಸದ್ಯ ಬಿಗಿ ಭದ್ರತೆ ಮಾಡಿದ್ದೇವೆ ಎಂದು ಹೇಳಿದರು.
ಇಬ್ಬರು ಸಿಬ್ಬಂದಿಗೆ ಸಹ ಏಟು ಬಿದ್ದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದ ಕಾರಣ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ವಿವರಿಸಿದರು.