ಮದ್ದೂರು ಗಲಭೆ – ರಾಜ್ಯದಲ್ಲಿ ಹಿಂದೂಗಳೇ ಟಾರ್ಗೆಟ್; ಎನ್‌ಐಎ ತನಿಖೆಗೆ ಆಗ್ರಹಿಸುವಂತೆ ಮನವಿ

Public TV
2 Min Read

– ಅಮಿತ್ ಶಾಗೆ ಹಿಂದೂ ಮುಖಂಡರಿಂದ ಪತ್ರ

ಬೆಂಗಳೂರು: ಮದ್ದೂರು (Maddur) ಗಣೇಶ ಮೆರವಣಿಗೆ ಗಲಾಟೆ ಹಿಂದೂ ಸಮಾಜದ ಆಕ್ರೋಶಕ್ಕೆ ಕಾರಣವಾಗ್ತಿದೆ. ಅದರಲ್ಲೂ ಕಳೆದೊಂದು ವರ್ಷಗಳಿಂದ ಪದೇ ಪದೇ ಈ ಘಟನೆಗಳು ಮರುಕಳಿಸುತ್ತಿದ್ದು, ಈ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದು, ಎನ್‌ಐಎ ತನಿಖೆಗೆ ಆಗ್ರಹಿಸುತ್ತಿದ್ದಾರೆ.

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Stone Pelting) ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಹಿಂದೂ ಸಮಾಜದ ಕೆಂಗಣ್ಣಿಗೂ ಕೂಡ ಕಾರಣವಾಗಿದ್ದು, ಆಕ್ರೋಶ ಕೂಡ ಹೊರಹಾಕಲಾಗುತ್ತಿದೆ. ಈಗಾಗಲೇ ಘಟನೆ ಖಂಡಿಸಿ ಅನೇಕ ಹಿಂದೂ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದು, ಈ ನಡುವೆ ಹಿಂದೂ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು, ಹಿಂದೂಗಳ ರಕ್ಷಣೆಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದರಿದ್ರ ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ಅಪಮಾನ, ಹಿಂದೂ ಭಾವನೆಗೆ ಧಕ್ಕೆ: ಬಿ.ವೈ.ವಿಜಯೇಂದ್ರ

ಬೆಂಗಳೂರಿನ (Bengaluru) ಹಿಂದೂ ಮುಖಂಡ ತೇಜಸ್ ಗೌಡ, ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದು, ರಾಜ್ಯದಲ್ಲಿ ಇತ್ತೀಚಿಗೆ ಆಗುತ್ತಿರುವ ಇಂತಹ ಘಟನೆಗಳ ಸಂಬಂಧ ಎನ್‌ಐಎ (NIA) ಮೂಲಕ ತನಿಖೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಹಳೇ ಮೈಸೂರು ಭಾಗದಲ್ಲಿ ಕಳೆದೊಂದು ವರ್ಷಗಳಿಂದ ಆಗುತ್ತಿರುವ ಅನ್ಯಧರ್ಮೀಯ ಗಲಭೆಗಳಿಂದ ಹಿಂದೂಗಳು ಭಯದಲ್ಲಿ ಬದುಕುವಂತಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮದ್ದೂರು ಗಲಭೆ ತಡೆಯೋ ಯೋಗ್ಯತೆಯೇ ಇಲ್ಲ: ಜೋಶಿ ತೀವ್ರ ಆಕ್ರೋಶ

ಕಳೆದ ವರ್ಷ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್ ಹಾಕಲಾಗಿತ್ತು. ನಂತರ ಮೈಸೂರಿನ ಉದಯಗಿರಿಯಲ್ಲೂ ಕ್ಷುಲ್ಲಕ ಕಾರಣಕ್ಕೆ ಪೊಲೀಸರ ಮೇಲೆಯೇ ದಾಳಿ ಮಾಡಲಾಗಿತ್ತು. ಈ ವರ್ಷವು ಮತ್ತೆ ಮಂಡ್ಯ ಜಿಲ್ಲೆಯ ಮದ್ದೂರು ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿ ಹಿಂದೂಗಳನ್ನ ಭಯಭೀತರನ್ನಾಗಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಈ ರೀತಿಯ ಭೀತಿಯಲ್ಲಿ ಬದುಕೋದು ಎಷ್ಟರ ಮಟ್ಟಿಗೆ ಸರಿ. ಈ ರೀತಿ ಘಟನೆಗಳ ಹಿಂದೆ ನಿಷೇಧಿತ ಇಸ್ಲಾಂ ಸಂಘಟನೆಗಳ ಗುಂಪಿರುವ ಅನುಮಾನ ಇದೆ. ಈ ಕೂಡಲೇ ಕೇಂದ್ರ ಗೃಹ ಇಲಾಖೆ ಮಧ್ಯಪ್ರವೇಶ ಮಾಡಿ ಎನ್‌ಐಎ ತನಿಖೆ ಮಾಡಿಸಬೇಕೆಂದು ಪತ್ರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ.

ಇನ್ನೂ ಮದ್ದೂರು ಘಟನೆ ಸಂಬಂಧ ಸ್ಥಳೀಯ ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೂ ಎನ್‌ಐಎ ತನಿಖೆಗಾಗಿ ಕೇಂದ್ರ ಗೃಹ ಇಲಾಖೆ ಗಮನಕ್ಕೆ ತರುವಂತೆ ಮನವಿ ಮಾಡಲಾಗಿದೆ. ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ಇದೇ ರೀತಿ ಕೃತ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಗಮನಹರಿಸಿ, ಕೇಂದ್ರ ಗೃಹ ಇಲಾಖೆ ಮೂಲಕ ತನಿಖೆ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ.

ಒಟ್ಟಾರೆ ವಿಘ್ನವಿನಾಶಕ ಮೆರವಣಿಗೆ ಯಾವುದೇ ವಿಘ್ನಗಳಿಲ್ಲದೆ, ಸುಗಮವಾಗಿ ಆಗಬೇಕಿತ್ತು. ಆದರೆ ಕಿಡಿಗೇಡಿಗಳಿಂದ ಮದ್ದೂರು ಗಣೇಶ ಮೆರವಣಿಗೆ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.

Share This Article