ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

Public TV
2 Min Read

ಬೆಂಗಳೂರು: ಕೆ.ಆರ್ ಮಾರ್ಕೆಟ್‍ನಲ್ಲಿ ಬಡ ವ್ಯಾಪರಸ್ಥರ ಮೇಲೆ ಪಾಲಿಕೆಯ ಅಧಿಕಾರಿಗಳು ಘರ್ಜಿಸುತ್ತಿದ್ದಾರೆ. ಹಾಡಹಗಲೇ ರೋಲ್ ಕಾಲ್ ದಂಧೆಗಿಳಿದು, ಕಾಸು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಕೆ.ಆರ್ ಮಾರ್ಕೆಟ್‍ನ ಮಾಮೂಲು ಜಗತ್ತಿನ ಕರಾಳ ದಂಧೆಯನ್ನ ನಿಮ್ಮ ಪಬ್ಲಿಕ್ ಟಿವಿ ಬಟಾಬಯಲು ಮಾಡುತ್ತಿದೆ.

ಕೆ.ಆರ್ ಮಾರ್ಕೆಟ್‍ನಲ್ಲಿ ನಡೆಯುವ ಮಾಮೂಲು ವಸೂಲಿ ದಂಧೆಗೆ ವ್ಯಾಪಾರಸ್ಥರು ಹೈರಣಾಗಿದ್ದಾರೆ. ಗಸ್ತು ತಿರುಗುವ ಪೊಲೀಸರು, ಕಸ ಎತ್ತುವ ಬಿಬಿಎಂಪಿಯ ಸಿಬ್ಬಂದಿ, ಅವರ ಮೇಲ್ವಿಚಾರಕರು, ಪುಡಿ ರೌಡಿಗಳು, ಹೀಗೆ ಇಲ್ಲಿ ಎಲ್ಲರೂ ಮಾಮೂಲಿ ವೀರರಾಗಿ ಘರ್ಜಿಸುತ್ತಿದ್ದಾರೆ.

ತುತ್ತಿನ ಚೀಲ ತುಂಬಿಸಿಕೊಳ್ಳಲು ಅದೆಷ್ಟೋ ವ್ಯಾಪಾರಸ್ಥರು ಕೆ.ಆರ್ ಮಾರ್ಕೆಟ್‍ಗೆ ಬರುತ್ತಾರೆ. ಆದರೆ ಪಾಲಿಕೆಯ ಅಧಿಕಾರಿಗಳು, ಪೊಲೀಸರು ರಾಜಾರೋಷವಾಗಿ ಪ್ರತಿಯೊಬ್ಬ ವ್ಯಾಪಾರಸ್ಥರಿಂದ ದಿನಕ್ಕೆ 10, 20, 50 ರೂ.ಯಂತೆ ಬೆಳಗ್ಗೆಯಿಂದ ಸಂಜೆ ತನಕ 30ಕ್ಕೂ ಹೆಚ್ಚು ಜನರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡಲ್ಲ ಎಂದರೆ ಅವರ ಮೇಲೆ ಅಟ್ಯಾಕ್ ಮಾಡಿ ಅಂಗಡಿಯನ್ನು ಎತ್ತಿಸುತ್ತಾರೆ. ಅದಕ್ಕಾಗಿಯೇ ಈ ಬಗ್ಗೆ ಧ್ವನಿಯೆತ್ತಲು ವ್ಯಾಪಾರಸ್ಥರು ಹೆದರುತ್ತಾರೆ.

ಪ್ರತಿನಿತ್ಯ ಈ ಅಧಿಕಾರಿ, ಪುಡಿ ರೌಡಿಗಳಿಂದ ರೋಸಿ ಹೋಗಿದ್ದ ಕೆಲ ವ್ಯಾಪಾರಸ್ಥರು ಪಬ್ಲಿಕ್ ಟಿವಿಯೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ ಎರಡು ದಿನದ ಹಿಂದೆ ದಸರಾ ಹಬ್ಬಕ್ಕೆ ಬಾಳೆ ದಿಂಡನ್ನು ಖರೀದಿಸಲು ಬಂದಿದ್ದ ಬಿಬಿಎಂಪಿ ಅಧಿಕಾರಿಯೊಬ್ಬ ಪುಟ್ಟ ವ್ಯಾಪಾರಿ ಬಾಲಕನ ಮೇಲೆ ದರ್ಪ ತೋರಿಸಿದ್ದಾನೆ. ಪುಗ್ಸಟ್ಟೆಯಾಗಿ ಬಾಳೆ ದಿಂಡನ್ನು ಕೇಳಿದ್ದಾನೆ. ಕೊಡಲ್ಲ ಎಂದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ, ದರ್ಪ ಮೆರೆದಿದ್ದಾನೆ.

ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅಂತಾರಲ್ಲ. ಹಾಗಾಯ್ತು ಈ ಬಿಬಿಎಂಪಿ ಅಧಿಕಾರಿಯ ದರ್ಪ, ದೌಲತ್ತು. ಊರಿಗೆಲ್ಲಾ ಬುದ್ಧಿ ಹೇಳುವ ಬಿಬಿಎಂಪಿ, ತನ್ನ ಸಿಬ್ಬಂದಿಯೇ ಹಗಲು ದರೋಡೆಗೆ ಇಳಿದಿರುವುದು ಇದು ಬಿಬಿಎಂಪಿಗೆ ನಾಚಿಕೆಗೇಡಿನ ಸಂಗತಿಯೇ ಸರಿ. ಪ್ರತಿನಿತ್ಯ ಅಂದಾಜು ಲೆಕ್ಕದಲ್ಲಿ ಎಷ್ಟು ಹಣವನ್ನು ವಸೂಲಿ ಮಾಡುತ್ತಾರೆ ಎನ್ನುವುದನ್ನು ನೋಡುವುದಾದರೆ,

(ಒಂದು ದಿನಕ್ಕೆ ವಸೂಲಿಯಾಗುವ ಹಣ) ಅಂದಾಜು ಲೆಕ್ಕದಲ್ಲಿ
1 ಸಾವಿರ ವ್ಯಾಪಾರಿಗಳಿಂದ ವಸೂಲಿ
ಒಂದು ದಿನಕ್ಕೆ 30 ರೂ. 30 ಜನರಿಂದ ವಸೂಲಿ ಮಾಡಿದರೂ ಒಂದು ದಿನಕ್ಕೆ 90 ಸಾವಿರ ರೂ.

ಇದು ಕೇವಲ ಸಣ್ಣಪುಟ್ಟ ವ್ಯಾಪಾರಸ್ಥರಿಂದ ವಸೂಲಿಯಾಗುವ ಹಣ. ದೊಡ್ಡ ದೊಡ್ಡ ಅಂಗಡಿಗಳಲ್ಲಿ 50, 60 ರೂ.ಯಂತೆ ವಸೂಲಿ ಮಾಡುತ್ತಾರೆ. ಇವೆಲ್ಲವನ್ನು ಲೆಕ್ಕಚಾರ ಮಾಡಿದರೆ, ದಿನಕ್ಕೆ ಏನಿಲ್ಲಾ ಅಂದರೂ 2 ಲಕ್ಷ ರೂ. ದಾಟುತ್ತೆ. ತಿಂಗಳಿಗೆ ಮೈ ಬಗ್ಗಿಸದೆ, ಬೆವರು ಸುರಿಸದೇ ಪುಕ್ಕಟ್ಟೆಯಾಗಿ ಅಕ್ರಮವಾಗಿ ಸಂಪಾದಿಸುವ ಹಣವಿದು. ಹಾಡಹಗಲೇ ಈ ವಸೂಲಿ ದಂಧೆ ನಡೆಯುತ್ತಿದ್ದರೂ ನಮ್ಮ ಬೆಂಗಳೂರು ಪೊಲೀಸ್ ಕಮೀಷನರ್ ಕಣ್ಣಿಗೆ ಬಿದ್ದಿಲ್ವಾ ಎಂದು ಬಡ ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *