ಚಾಮರಾಜನಗರ: ಮಲೆ ಮಹದೇಶ್ವರ (Male Mahadeshwar Hills) ವನ್ಯಧಾಮದಲ್ಲಿ 5 ಹುಲಿಗಳ ಹತ್ಯೆಯ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಜಿಲ್ಲೆಯ ಹುಲಿ ಸುರಕ್ಷಿತ ಅರಣ್ಯ ಹಾಗೂ ವನ್ಯಜೀವಿಧಾಮಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯ ಅರಣ್ಯಗಳಲ್ಲಿ ಗಸ್ತು ತೀವ್ರಗೊಳಿಸಿರುವುದಲ್ಲದೆ ಕಾಡಿನೊಳಗೆ ಜಾನುವಾರುಗಳನ್ನು ಬಿಡುವುದಕ್ಕೆ ತಡೆ ನೀಡಲಾಗಿದೆ.
ಕರ್ನಾಟಕ ರಾಜ್ಯದಲ್ಲೇ ಎರಡು ಹುಲಿ ಸುರಕ್ಷಿತ ಅರಣ್ಯ ಹಾಗೂ ಎರಡು ವನ್ಯಜೀವಿಧಾಮಗಳನ್ನು ಹೊಂದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ಚಾಮರಾಜನಗರಕ್ಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿ ಹುಲಿಗಳ ನಾಡು ಎಂಬ ಖ್ಯಾತಿಗೂ ಚಾಮರಾಜನಗರ ಭಾಜನವಾಗಿದೆ. ಇತ್ತೀಚಿಗೆ ಆಶಾದಾಯಕವಾಗಿ ಹುಲಿಗಳ ಸಂಖ್ಯೆ ವೃದ್ಧಿಸುತ್ತಿದ್ದ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳಿಗೆ ವಿಷಪ್ರಾಶಾನ ಮಾಡಿ ಕೊಂದು ಹಾಕಿರುವುದು ಹುಲಿಗಳ ಸಂತತಿ ವೃದ್ಧಿಗೆ ಭಾರೀ ಪೆಟ್ಟು ಬಿದ್ದಿದೆ.ಇದನ್ನೂ ಓದಿ: ರವಿಕುಮಾರ್ ಸದನದಲ್ಲಿ ಅಲ್ಲ, ನಿಮ್ಮಾನ್ಸ್‌ನಲ್ಲಿ ಇರಬೇಕು: ಪ್ರಿಯಾಂಕ್ ಖರ್ಗೆ ಲೇವಡಿ
ಈ ಕರಾಳ ಘಟನೆಯ ನಂತರ ಎಚ್ಚೆತ್ತಿರುವ ಅರಣ್ಯ ಇಲಾಖೆ ಜಿಲ್ಲೆಯ ಬಂಡೀಪುರ ಹಾಗು ಬಿಳಿಗಿರಿರಂಗನ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಿದೆ. ಈ ಅರಣ್ಯಗಳಲ್ಲಿ ಗಸ್ತು ತೀವ್ರಗೊಳಿಸಲಾಗಿದೆ. ಕಾಡಂಚಿನ ಗ್ರಾಮಸ್ಥರು ಜಾನುವಾರುಗಳನ್ನು ಅರಣ್ಯದೊಳಗೆ ಮೇಯಲು ಬಿಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ತಮಿಳುನಾಡು ಗಡಿ ಭಾಗದ ಹಳ್ಳಿಗಳಿಂದ ಬರುವ ಜಾನುವಾರುಗಳಿಗೂ ಕಡಿವಾಣ ಹಾಕಲಾಗಿದೆ.
ಹುಲಿಗಳ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖಾ ತಂಡ ಜು.10ರೊಳಗೆ ವರದಿ ನೀಡುವ ನಿರೀಕ್ಷೆಯಿದೆ. ಅರಣ್ಯದಂಚಿನಲ್ಲಿ ಸಮರ್ಪಕ ಆನೆ ಕಂದಕ, ಸೋಲಾರ್ ಬೇಲಿ ಹಾಗೂ ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಮೂಲಕ ಮಾನವ, ವನ್ಯಜೀವಿ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಮುಂದಾಗಬೇಕಿದೆ.ಇದನ್ನೂ ಓದಿ: ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧ – ಟೆಕ್ಕಿ ಪತಿಯನ್ನೇ ಹತ್ಯೆಗೈದ ಪತ್ನಿ!