‘ನಾನಲ್ಲ ದೆವ್ವ ಕೊಲೆ ಮಾಡಿದ್ದು’ – ಮಗನ ಕತ್ತು ಹಿಸುಕಿ ಕೊಂದು ಭೂತಗಳ ಕಥೆ ಕಟ್ಟಿದ ಮಲತಾಯಿ

Public TV
1 Min Read

– ಮಲತಾಯಿ, ತಂದೆಯನ್ನು ಬಂಧಿಸಿದ ಪೊಲೀಸರು

ಲಕ್ನೋ: 5 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಂದ ಮಲತಾಯಿ ಪೊಲೀಸರ ಬಳಿ ದೆವ್ವಗಳು ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಗಿರಿಯಾ ಖಲ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃತ್ಯವೆಸಗಿದ ಮಲತಾಯಿ ಹಾಗೂ ತಂದೆ ಚಂದನ್ ಮೇಹ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ಮೃತದೇಹ ಮಹಿಳೆಯ ಕೋಣೆಯಲ್ಲಿ ಪತ್ತೆಯಾಗಿತ್ತು. ಆತನ ದೇಹದ ಮೇಲೆ, ಮುಖದ ಮೇಲೆ ಗಾಯಗಳು ಆಗಿದ್ದವು. ಈ ಬಗ್ಗೆ ವಿಚಾರಣೆ ವೇಳೆ ಮಹಿಳೆಯನ್ನು ಕೇಳಿದರೆ, ನಾನು ಕೊಲೆ ಮಾಡಿಲ್ಲ. ದೆವ್ವ, ಭೂತಗಳು ಬಾಲಕನನ್ನು ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ್ದಾಳೆ.

ಮಹಿಳೆಯ ದೆವ್ವದ ಕಥೆ ಕೇಳಿ ಗ್ರಾಮಸ್ಥರು ಭಯಗೊಂಡಿದ್ದಾರೆ. ಈಗಾಗಲೇ ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಈ ಕೊಲೆ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ, ಕೊಲೆಯಾದ ಬಾಲಕ ಮಹಿಳೆಯ ಎರಡನೇ ಪತಿ ಚಂದನ್ ಮೇಹ್ತಾನ ಮಗ. ಮೊದಲನೇ ಪತಿ ಬಿಟ್ಟುಹೋದ ಬಳಿಕ ಮಹಿಳೆ ಎರಡನೇ ಮದುವೆ ಆಗಿದ್ದಳು. ಚಂದನ್ ಮೇಹ್ತಾನ ಪತ್ನಿ 4 ವರ್ಷದ ಹಿಂದೆ ಮೃತಪಟ್ಟಿದ್ದಳು. ಆತನಿಗೆ 5 ವರ್ಷದ ಮಗ ಹಾಗೂ 7 ವರ್ಷದ ಮಗಳಿದ್ದಳು. ಆತನಿಗೂ ಕೂಡ ಇದು ಎರಡನೇ ಮದುವೆ ಆಗಿದೆ. ಮೊದ ಮೊದಲು ಮಹಿಳೆ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು.

ಆದರೆ ಸಮಯ ಕಳೆಯುತ್ತಿದ್ದಂತೆ ಆಕೆಯ ವರ್ತನೆ ಬದಲಾಗಿತ್ತು. ಮಕ್ಕಳನ್ನು ಆಕೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಬಹುಶಃ ಮಕ್ಕಳನ್ನು ಸಾಕಬೇಕಲ್ಲ ಎಂಬ ಕಾರಣಕ್ಕೆ ಮಹಿಳೆ ಬಾಲಕನನ್ನು ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *