– ಸಮಾನ ಮನಸ್ಕ 8 ರಾಜ್ಯಗಳ ಸಚಿವರ ಜೊತೆ ಸಭೆ
– ಜಿಎಸ್ಟಿ ಸರಳೀಕರಣದ ಲಾಭ ಜನರ ಪಾಲಾಗಲಿ
– ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಪರಿಹಾರ ನೀಡಲಿ
– ಆದಾಯ ನಷ್ಟವಾದರೆ ರಾಜ್ಯದ ಸ್ವಾಯತ್ತತೆಗೆ ಧಕ್ಕೆ
ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್ಟಿ ಸರಳೀಕರಣ (GST Simplification) ವ್ಯವಸ್ಥೆಯಿಂದ ರಾಜ್ಯಗಳ ಆದಾಯ 85,000 ಕೋಟಿಯಿಂದ 2.5 ಲಕ್ಷ ಕೋಟಿ ವರೆಗೆ ನಷ್ಟ ಉಂಟಾಗಲಿದ್ದು, ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಜಿಎಸ್ಟಿ ಕೌನ್ಸಿಲ್ ನಷ್ಟ ಪರಿಹಾರ ನೀಡಲಿ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಒತ್ತಾಯಿಸಿದರು.
ಜಿಎಸ್ಟಿ ಸರಳೀಕರಣ ಹಾಗೂ ರಾಜ್ಯಗಳ ಸ್ವಾಯತ್ತತೆಗೆ ಸಂಬಂಧಿಸಿ ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸಮಾನ ಮನಸ್ಕ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ತೆಲಂಗಾಣ ರಾಜ್ಯದ ಹಣಕಾಸು ಸಚಿವ ತಂಗಮ್ ತೆನ್ನರಸು, ಹಿಮಾಚಲ ಪ್ರದೇಶದ ಹಣಕಾಸು ಸಚಿವ ರಾಜೇಶ್ ಧರ್ಮನಿ, ಜಾರ್ಖಂಡ್ ಹಣಕಾಸು ಸಚಿವ ರಾಧಾ ಕೃಷ್ಣ ಕಿಶೋರ್, ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ, ಕೇರಳ ಹಣಕಾಸು ಸಚಿವ ಬಾಲಗೋಪಾಲ್, ತೆಲಂಗಾಣ ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ, ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಲಯ ಅಧಿಕಾರಿ ಉಜ್ಜೈನಿ ದತ್ತ ಪಾಲ್ಗೊಂಡಿದ್ದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!
ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜಿಎಸ್ಟಿ ಕೌನ್ಸಿಲ್ ನಮ್ಮ ಮುಂದಿಟ್ಟಿರುವ ಜಿಎಸ್ಟಿ ತೆರಿಗೆ ಸರಳೀಕರಣ ವ್ಯವಸ್ಥೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು ಹಾಗೂ ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗುವಂತಿರಬೇಕೇ ಹೊರತು ಕೆಲವು ಕಂಪನಿಗಳಿಗೆ ಮಾತ್ರ ಲಾಭ ಆಗುವಂತಿರಬಾರದು ಎಂದು ಅಭಿಪ್ರಾಯಪಟ್ಟರು.
ಪ್ರಸ್ತಾವಿತ ಜಿಎಸ್ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ಖೋತಾ ಆಗಬಹುದು ಎಂಬ ಅಂದಾಜಿನ ಕುರಿತು ಕೇಂದ್ರ ಸರ್ಕಾರ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ರಾಜ್ಯಗಳಿಗೆ ಭಾಗಶಃ 85 ಸಾವಿರ ಕೋಟಿಯಿಂದ 2.5 ಲಕ್ಷ ಕೋಟಿ ವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ. ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟ ಉಂಟಾದರೆ ಕೇಂದ್ರ ಸರ್ಕಾರಕ್ಕೂ ನಷ್ಟವಾಗಲಿದೆ. ಹೀಗಾಗಿ, ಜಿಎಸ್ಟಿ ಸ್ಥಿರಗೊಳ್ಳುವ ವರೆಗೆ ಕೇಂದ್ರ ಸರ್ಕಾರ ತಮ್ಮ ಖಜಾನೆಯಿಂದ ಒಂದು ರೂಪಾಯಿಯನ್ನೂ ನೀಡುವ ಅಗತ್ಯವಿಲ್ಲ. ಬದಲಿಗೆ ಜಿಎಸ್ಟಿ ಕೌನ್ಸಿಲ್ ಪರಿಧಿಯಲ್ಲೇ ಪ್ರತಿಯೊಂದು ರಾಜ್ಯಗಳಿಗೂ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ಕೇಂದ್ರದ ಆದಾಯದಲ್ಲಿ ಜಿಎಸ್ಟಿ ಪಾಲು ಕೇವಲ ಶೇ. 28ರಷ್ಟು ಮಾತ್ರ. ಉಳಿದ ಶೇ.72ರಷ್ಟು ಆದಾಯವನ್ನು ಕೇಂದ್ರ ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್, ಡೆವಿಡೆಂಟ್ ಹಾಗೂ ವಿವಿಧ ಸೆಸ್‌ಗಳು ಕೇಂದ್ರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇ.17 ರಿಂದ ಶೇ.20 ರಷ್ಟು ಆದಾಯ ಗಳಿಸುತ್ತದೆ. ಸೆಸ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ಸಹ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಆದರೆ, ರಾಜ್ಯಗಳ ಆದಾಯದಲ್ಲಿ ಜಿಎಸ್ಟಿ ಪಾಲು ಶೇ.50 ರಷ್ಟು. ಹೀಗಾಗಿ, ಅಭಿವೃದ್ಧಿಗಾಗಿ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್ಟಿಯನ್ನೇ ನೆಚ್ಚಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಆದಾಯದ ಶೇ.20ರಷ್ಟು ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಪ್ರಶ್ನಾರ್ಥಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: IMF ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ನೇಮಕ
ಜಿಎಸ್ಟಿಯನ್ನು ಪರಿಚಯಿಸುವಾಗ ಈ ನೂತನ ತೆರಿಗೆ ವ್ಯವಸ್ಥೆ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎನ್ನಲಾಗಿತ್ತು. ಇದು ನಿಜವಾಗಿದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದಾಯ ದುಪ್ಪಟ್ಟಾಗಬೇಕಿತ್ತು. ಆದರೆ, ಕಳೆದ 7-8 ವರ್ಷಗಳ ಅನುಭವದಲ್ಲಿ ಈ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಪ್ರತಿ ವರ್ಷವೂ ಎಲ್ಲಾ ರಾಜ್ಯಗಳ ನಿವ್ವಳ ಆದಾಯ ಗಣನೀಯವಾಗಿ ಇಳಿಯುತ್ತಲೇ ಇದೆ. ಜಿಎಸ್ಟಿ ಗೆ ಮುನ್ನ ವ್ಯಾಟ್ ಅಡಿಯಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದ ಕಾಲದಲ್ಲಿ ದೇಶದ ಜಿಡಿಪಿಗೆ ವ್ಯಾಟ್ ಕೊಡುಗೆ ಶೇ 6.1 ರಷ್ಟು ಇತ್ತು. ಆದರೆ, ಈಗ ಜಿಎಸ್ಟಿ ಜಾರಿಯಾದ ಬಳಿಕ ಈ ಪ್ರಮಾಣ ಈವರೆಗೆ ಶೇ. 6.1 ಕ್ಕೆ ತಲುಪಲಾಗಿಲ್ಲ. ಪ್ರಸ್ತುತ ಜಿಡಿಪಿಗೆ ಜಿಎಸ್ಟಿ ಕೊಡುಗೆ ಕೇವಲ ಶೇ. 5.9 ರಷ್ಟು ಮಾತ್ರ. ಒಟ್ಟರೆ ಜಿಎಸ್ಟಿಯಿಂದಾಗಿ ರಾಜ್ಯ ಹಾಗೂ ಕೇಂದ್ರಕ್ಕೆ ಆದಾಯ ನಷ್ಟವಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ವಿವರಿಸಿದರು.
ಜಿಎಸ್ಟಿ ತೆರಿಗೆ ವ್ಯವಸ್ಥೆಯನ್ನು 2017ರಲ್ಲಿ ಪರಿಚಯಿಸುವಾಗ ಕೇಂದ್ರ ಸರ್ಕಾರ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ರಾಜ್ಯಗಳಿಗೆ ತೆರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಹೇಳಿತ್ತು. ಆದರೆ, ಪರಿಹಾರ ವ್ಯವಸ್ಥೆಯನ್ನು 2022ಕ್ಕೆ ತೆಗೆದುಹಾಕಲಾಗಿತ್ತು. ಪರಿಣಾಮ ಬಹುಪಾಲು ರಾಜ್ಯಗಳು ಶೇ.25 ರಷ್ಟು ಆದಾಯ ನಷ್ಟ ಎದುರಿಸಿದ್ದವು. ರಾಜ್ಯಗಳ ಆದಾಯ ಶೇ.25 ರಷ್ಟು ಕುಸಿಯುತ್ತಿದ್ದ ಸಂದರ್ಭದಲ್ಲಿ ಜಿಎಸ್ಟಿ ಸ್ಥಿರಗೊಂಡಿದೆ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ಪ್ರಶ್ನಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಜಿಎಸ್ಟಿ ಸರಳೀಕರಣ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಜಿಎಸ್ಟಿ ಕೌನ್ಸಿಲ್ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ನಾವು ತೆರಿಗೆ ಸರಳೀಕರಣದ ಪರ ಇದ್ದೇವೆ. ಆದರೆ, ರಾಜ್ಯದ ಆದಾಯವನ್ನೂ ಕಾಪಾಡಬೇಕು. ಸಂವಿಧಾನ 2/3 ಜನರ ಯೋಗಕ್ಷೇಮ ಹಾಗೂ ಅಭಿವೃದ್ಧಿ ಕರ್ತವ್ಯವನ್ನು ರಾಜ್ಯಕ್ಕೆ ನೀಡಿದೆ. ಆದರೆ, 2/3 ರಷ್ಟು ಆದಾಯವನ್ನು ಕೇಂದ್ರಕ್ಕೆ ನೀಡಿದೆ. ಈ ನಿಯಮ ರಾಜ್ಯಗಳ ಸುಸ್ಥಿರ ಅಭಿವೃದ್ಧಿಗೆ ಮಾರಕ. ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಕೆಲಸಗಳನ್ನು ರಾಜ್ಯಗಳೇ ಮಾಡಬೇಕು. ಆದರೆ, ಆದಾಯ ಮಾತ್ರ ಕೇಂದ್ರದ ಪಾಲಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರೂ ಸಹ ಅವರ ಯೋಗಕ್ಷೇಮದ ಬೇಡಿಕೆ ಹಾಗೂ ಅಭಿವೃದ್ಧಿ ಅಗತ್ಯತೆಗಳಿಗೆ ರಾಜ್ಯ ಸರ್ಕಾರಗಳನ್ನೇ ಅವಲಂಭಿಸಿದ್ದಾರೆ. ಕೇಂದ್ರಗಳ ಕೊಡುಗೆಯೂ ಇದೆ. ಆದರೆ, ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳೇ ಅಧಿಕ.
ರಾಜ್ಯಗಳಿಗೆ ಅಧಿಕ ನಷ್ಟವಾದರೆ ಅಂತಿಮವಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯಗಳ ಸ್ವಾಯತ್ತತೆ ತುಂಬಾ ಮುಖ್ಯವಾದ ವಿಚಾರ. ಪ್ರತಿಯೊಂದು ರಾಜ್ಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸುಸ್ಥಿರ ಆದಾಯ ಅತ್ಯಂತ ಮುಖ್ಯ. ಆದರೆ, ಆದಾಯ ಕೊರತೆ ಉಂಟಾಗಿ ಸ್ವಂತ ಸರ್ಕಾರ ನಡೆಸಲು ಕೇಂದ್ರದ ಕಡೆ ಕೈಚಾಚುವಂತಾದರೆ ರಾಜ್ಯಗಳ ಸ್ವಾಯತ್ತೆ ಎಂಬ ಪದವೇ ಅರ್ಥ ಕಳೆದುಕೊಳ್ಳುತ್ತದೆ. ಸಹಕಾರಿ ಒಕ್ಕೂಟವಾದ ಪದಗಳಲ್ಲಿ ಮಾತ್ರವಲ್ಲದೆ ಕೆಲಸದಲ್ಲೂ ಚಾಲ್ತಿ ಇದ್ದರೆ ಮಾತ್ರ ಸ್ವಾಯತ್ತತೆ ಉಳಿಯಲು ಸಾಧ್ಯ ಎಂದು ವ್ಯಾಖ್ಯಾನಿಸಿದರು.