ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ – ಆ.8ರಂದು ಸುಪ್ರೀಂ ಕೋರ್ಟ್ ವಿಚಾರಣೆ

Public TV
2 Min Read

ನವದೆಹಲಿ: ಜಮ್ಮು ಕಾಶ್ಮೀರಕ್ಕೆ (Jammu Kashmir) ಮರಳಿ ರಾಜ್ಯದ ಸ್ಥಾನಮಾನ ದೊರಕಿಸಿಕೊಡುವಂತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಆ.8ರಂದು ನಡೆಸಲಿದೆ.

ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಇಂದು (ಆ.6) ಸಿಜೆಐ ಬಿಆರ್ ಗವಾಯಿ ಅವರ ನೇತೃತ್ವದ ಪೀಠದ ಎದುರು ಪ್ರಕರಣವನ್ನು ಪ್ರಸ್ತಾಪಿಸಿದ್ದು, ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.ಇದನ್ನೂ ಓದಿ: ಅಮಿತ್ ಶಾ ವಿರುದ್ಧದ ಮಾನಹಾನಿ ಕೇಸ್ – ರಾಹುಲ್ ಗಾಂಧಿಗೆ ಜಾಮೀನು ಮಂಜೂರು

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಲೇಜು ಅಧ್ಯಾಪಕ ಜಹೂರ್ ಅಹ್ಮದ್ ಭಟ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ರಾಜ್ಯದ ಸ್ಥಾನಮಾನ ಮರುಸ್ಥಾಪಿಸದೇ ಇರುವುದರಿಂದ ಕಾಶ್ಮೀರದ ಜನರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ಉಲ್ಲೇಖಿಸಿದ್ದರು. ರಾಜ್ಯದ ಸ್ಥಾನಮಾನ ನೀಡುವ ಮೊದಲೇ ಚುನಾವಣೆ ನಡೆಸಿ ಶಾಸಕಾಂಗ ಸಭೆ ರಚಿಸಲು ಹೊರಡುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದರು.

ಕಾಂಗ್ರೆಸ್ ಮತ್ತು ವಿಧಾನಸಭೆಯ ಕೆಲವು ಸ್ವತಂತ್ರ್ಯ ಸದಸ್ಯರ ಬೆಂಬಲದೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಸರ್ಕಾರ ಪ್ರಸ್ತುತ ಕಾಶ್ಮೀರದಲ್ಲಿ ಅಧಿಕಾರ ನಡೆಸುತ್ತಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ಕೆಲ ವರ್ಷಗಳ ಹಿಂದೆಯೇ ರದ್ದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಲಾಗಿತ್ತು. ಅದೇ ರಾಜ್ಯದಿಂದ ಲಡಾಖ್ ಪ್ರದೇಶವನ್ನು ಮತ್ತೊಂದು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಾಗಿತ್ತು ಎಂದಿದ್ದರು.

ಆರ್ಟಿಕಲ್ 370 ರದ್ದತಿ ಎತ್ತಿಹಿಡಿದು 2023ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಕೋರಿ ಹಲವು ಅರ್ಜಿಗಳ ಸಲ್ಲಿಕೆಯಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ 2024ರ ಮೇನಲ್ಲಿ ವಿಚಾರಣೆ ನಡೆಸಿ, ಅರ್ಜಿಗಳನ್ನು ವಜಾಗೊಳಿಸಿತ್ತು. ಇದೇ ವೇಳೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತಾತ್ಕಾಲಿಕವಾದದ್ದು. ಈ ಪ್ರದೇಶಕ್ಕೆ ಮರಳಿ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದಿದ್ದ ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತ್ತು.ಇದನ್ನೂ ಓದಿ: Shivamogga | ಕಳಚಿದ ತಾಳಗುಪ್ಪ – ಮೈಸೂರು ರೈಲು ಬೋಗಿ; ತಪ್ಪಿದ ಭಾರೀ ಅನಾಹುತ

Share This Article