ಜಯಂತಿ ಆಚರಣೆಗಳಿಗೆ ಬ್ರೇಕ್ ಹಾಕುವ ಕುರಿತು ಚರ್ಚಿಸಿ ನಿರ್ಧಾರ – ಸಿ.ಟಿ.ರವಿ

Public TV
2 Min Read

ತುಮಕೂರು: ಮಹಾತ್ಮರ ಜಯಂತಿಗಳ ಆಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಲಿದೆಯಾ ಎಂಬ ಅನುಮಾನ ಇದೀಗ ಎದ್ದಿದ್ದು, ಈ ಕುರಿತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸುಳಿವು ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಯಂತಿಗಳ ಕುರಿತು ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ. ಜಯಂತಿಯ ಸ್ವರೂಪ ಹೇಗೆ ಇರಬೇಕು ಎಂಬುದರ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ, ನಂತರ ಆ ವರದಿಯನ್ನು ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಷ್ಟೋ ಜಯಂತಿಗಳು ಸಂಘಟಕರು ಹಾಗೂ ಜನರು ಇಲ್ಲದೆ ಸೊರಗಿ ಹೋಗಿವೆ. ಕೆಲ ಜಯಂತಿಗಳು ಜಾತಿಗೆ ಸೀಮಿತವಾಗಿವೆ. ಜಾತಿ ಮೀರಿ ಬದುಕುವ ಮಹಾತ್ಮರನ್ನು ಜಾತಿಯ ಫ್ರೇಮ್‍ಗೆ ತಂದು ಕಟ್ಟಿ ಹಾಕುವುದು ಅವರ ತತ್ವಕ್ಕೆ ಮಾಡಿದ ಅಪಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಯಂತಿ ರದ್ದಾದರೆ ಅದನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಇದಕ್ಕೆ ಆಸ್ಪದ ಕೊಡದ ರೀತಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎನ್ನುವ ಮೂಲಕ ಜಯಂತಿಗಳನ್ನು ರದ್ದು ಮಾಡುವ ಚಿಂತನೆ ಸರ್ಕಾರದ ಮುಂದಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಜೊತೆಗೆ ಟಿಪ್ಪು ಜಯಂತಿಯನ್ನು ಈಗಾಗಲೇ ರದ್ದು ಮಾಡಲಾಗಿದೆ. ಅದನ್ನು ಪುನರ್ ವಿಮರ್ಶೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸಿ.ಟಿ.ರವಿ ಖಡಕ್ಕಾಗಿ ಹೇಳಿದ್ದಾರೆ.

ಡಿಕೆಶಿ ಜೈಲಿನಲ್ಲಿದ್ದರೆ ಬಿಜೆಪಿಗೆ ಬಲ ಬರುತ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಡಿಕೆಶಿ ಇದ್ದಾಗಲೇ ಲೋಕಸಭಾ ಚುನಾವಣೆಯಲ್ಲಿ 25 ಸೀಟ್ ಗೆಲ್ಲಲಿಲ್ಲವೇ? 104 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿಲ್ಲವೇ? ಅವರು ಹೊರಗಿದ್ದಾಗ ಅವರ ಜಿಲ್ಲೆಯಲ್ಲಿ ಗೆದ್ದಿದ್ದು ಒಂದು ಕ್ಷೇತ್ರ, ಅದೂ ಅವರು ಗೆದ್ದ ಕ್ಷೇತ್ರ ಮಾತ್ರ. ಅವರಿಗೆ ತಾಕತ್ತಿಲ್ಲ ಎಂದು ನಾವು ಭಾವಿಸಿಲ್ಲ. ಆದರೆ, ಅತಿಮಾನುಷ ಶಕ್ತಿ ಇದೆ ಎಂದು ಭಾವಿಸಿದರೆ ಅದು ತಪ್ಪು ಎಂದು ಹೇಳಿದ್ದಾರೆ.

ಎರಡೂ ರಾಜ್ಯದ ಜನರಿಗೆ ಹದ್ದುಗಳು
ರಾಜ್ಯದ ಪಾಲಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಹದ್ದುಗಳೆ. ಎರಡೂ ಪಕ್ಷಗಳು ರಾಜ್ಯವನ್ನು ಕಿತ್ತು ತಿನ್ನುವ ಕೆಲಸ ಮಾಡುತ್ತಿವೆ. ಹೀಗಾಗಿ ಎರಡೂ ಪಕ್ಷಗಳು ಸಹ ಜನರ ಪಾಲಿಗೆ ಹದ್ದುಗಳಾಗಿವೆ. ಆದರೆ, ವ್ಯಕ್ತಿಗತವಾಗಿ ಯಾರನ್ನೂ ಹದ್ದು ಎಂದು ಹೇಳಲಾರೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಜನರು ಹುಷಾರಾಗಿರಬೇಕು ಎಂದು ಚಾಠಿ ಬೀಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಸರ್ಕಾರ ಬೀಳಲಿದೆ ಎಂಬ ಕೋಡಿ ಮಠದ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನದಿ ಹಾಗೂ ಋಷಿ ಮೂಲ ಕೆಣಕಬಾರದು. ಹಾಗಾಗಿ ನಾನು ಕೆಣಕಲ್ಲ. ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯ ಎಷ್ಟು ನಿಜವಾಗಿದೆ, ಎಷ್ಟು ಸುಳ್ಳಾಗಿದೆ ಎಂಬುದನ್ನು ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *