ಕಾಂಗ್ರೆಸ್-ಬಿಜೆಪಿ ಮಧ್ಯೆ ಸ್ಟಾರ್ಟ್ ಅಪ್ ದಂಗಲ್ – ತೆಲಂಗಾಣ ಜೊತೆ ಹೋಲಿಸಿದ ಡಿಕೆಶಿಗೆ ಸಿಎಂ ಕ್ಲಾಸ್

Public TV
3 Min Read

– ಬೆಂಗಳೂರಿನ ಉದ್ಯಮಿಯ ಟ್ವೀಟ್ ವಿವಾದದ ಮೂಲ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಧರ್ಮ ದಂಗಲ್ ನಡುವೆ ಸ್ಟಾರ್ಟ್ ಅಪ್ ದಂಗಲ್ ಶುರುವಾದಂತಿದೆ. ಸಿಲಿಕಾನ್ ಸಿಟಿಯ ಉದ್ಯಮಿಯೊಬ್ಬರಿಗೆ ತೆಲಂಗಾಣ ಸಚಿವರು ಬೆಂಗಳೂರು ಬಿಟ್ಟು ನಮ್ಮಲ್ಲಿಗೆ ಹೂಡಿಕೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೆ ಈ ವಿವಾದದ ಮೂಲವಾಗಿದೆ. ಆದರೆ ಈ ಬೆಳವಣಿಗೆಯಲ್ಲಿ ರಾಜ್ಯ ನಾಯಕರುಗಳು ರಾಜ್ಯದ ಹಿತ ಮರೆತವರಂತೆ ಕೆಸರೆರಚಾಟ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಕೋರಮಂಗಲದ ಖಾತಾ ಬುಕ್ ಸಿಇಓ ರವೀಶ್ ನರೇಶ್ ಐದು ದಿನಗಳ ಹಿಂದೆ ಬೆಂಗಳೂರು ಮೂಲಭೂತ ಸೌಕರ್ಯ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದರು. ಪ್ರಧಾನಿ ಮೋದಿ, ರಾಜ್ಯ ಸರ್ಕಾರ ಹಾಗೂ ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಸಹಾ ಮಾಡಿದ್ದರು. ಈ ಟ್ವೀಟನ್ನೇ ಬಂಡವಾಳ ಮಾಡಿಕೊಂಡು ತೆಲಂಗಾಣ ಸಚಿವ ಕೆಟಿಆರ್ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ನಮ್ಮ ಹೈದರಬಾದ್‍ಗೆ ಬನ್ನಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಕೆಟಿಆರ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಿಮ್ಮ ವಾಲೆಂಜ್ ಸ್ವೀಕರಿಸುತ್ತೇನೆ 2023ಕ್ಕೆ ನಮ್ಮದೇ ಸರ್ಕಾರ ಬರುತ್ತೆ, ಆಗ ಬೆಂಗಳೂರನ್ನ ಉತ್ತಮ ನಗರವಾಗಿ ರೂಪಿಸುತ್ತೇವೆ ಎಂದಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಕೆಟಿಆರ್, ನಿಮ್ಮ ರಾಜ್ಯದ ರಾಜಕೀಯ ನನಗೆ ಗೊತ್ತಿಲ್ಲ. ನಿಮ್ಮ ಪಕ್ಷ ಗೆಲ್ಲುತ್ತೋ ಇಲ್ವೋ ಗೊತ್ತಿಲ್ಲ. ಆದರೆ ನಿಮ್ಮ ಚಾಲೆಂಜ್ ತಗೆದುಕೊಳ್ಳುತ್ತೇನೆ. ತೆಲಂಗಾಣ ಕರ್ನಾಟಕದ ನಡುವೆ ಆರೋಗ್ಯಕರ ಪೈಪೋಟಿ ನಡೆಯಲಿ ಜೊತೆಗೆ ಹಿಜಾಬ್ ಲಾಲ್ ರಾಜಕೀಯ ಬೇಡ ಎಂದು ಕುಟುಕಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ರಾಜ್ಯ ಬಿಜಪಿ 2023 ರಲ್ಲಿ ಕೆಟಿಆರ್ ಡಿಕೆಶಿ ಇಬ್ಬರು ಪ್ಯಾಕ್ ಅಪ್ ಮಾಡಬೇಕಾಗುತ್ತೆ ಡಬ್ಬಲ್ ಇಂಜಿನ್ ಸರ್ಕಾರ ತೆಲಂಗಾಣದಲ್ಲೂ ಬರಲಿದೆ ಎರೆಡೂ ಕಡೆ ಅಭಿವೃದ್ಧಿ ಆಗಲಿದೆ ಎಂದು ಟ್ವೀಟ್ ಮೂಲಕ ತಿವಿದಿದೆ. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್ ಆಸ್ಪತ್ರೆಗೆ ದಾಖಲು

ಸಚಿವ ಸುಧಾಕರ್ ಸಹಾ ಪಕ್ಷದ ನಿಲುವನ್ನೇ ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಸಚಿವ ಅಶ್ವಥ್ ನಾರಾಯಣ ಅವರು ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ಜನತೆಯ ಹಿತ ಕಾಪಾಡುವ ಬಗ್ಗೆ ನೀವು ಯೋಚಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ತೆಲಂಗಾಣ ಸರ್ಕಾರದೊಂದಿಗೆ ನೀವು ಯಾವ ರೀತಿಯ ರಾಜಕೀಯ ಹೊಂದಾಣಿಕೆಯನ್ನು ಹೊಂದಿದ್ದೀರಿ? ನಿಮ್ಮ ರಾಜಕೀಯ ಲೆಕ್ಕಾಚಾರಗಳಿಗೆ ಬೇಕಾಗಿ ರಾಜ್ಯದ ಘನತೆಯ ಬಗ್ಗೆ ಸವಾಲು ಹಾಕಬೇಡಿ ಅಂತಾ ಖಾರವಾಗಿ ಟೀಕಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಡಿಕೆಶಿ ಸಿಎಂ ಆಗಲಿ ಸಚಿವರಾಗಲಿ ಪ್ರತಿಕ್ರಿಯಿಸದೆ ಇರುವಾಗ ರಾಜ್ಯದ ಪರವಾಗಿ ನಾನು ಮಾತನಾಡಿದೆ ಎಂದಿದ್ದಾರೆ.

ಹೀಗೆ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಒಂದರ ಸಿಇಓ ಮಾಡಿದ ಟ್ವೀಟ್ ಈಗ ರಾಜಕೀಯ ಕೆಸರೆಚಾಟಕ್ಕೆ ವೇದಿಕೆಯಾಗಿದೆ. ಇದನ್ನ ತೆಲಂಗಾಣ ಸಚಿವ ಕೆಟಿಆರ್ ತಮ್ಮ ರಾಜ್ಯದ ಪರವಾಗಿ ಬಳಸಿಕೊಂಡು ಬೆಂಗಳೂರು ಹಾಗೂ ರಾಜ್ಯವನ್ನ ಟೀಕಿಸಿದ್ದಾರೆ. ಕೆ.ಟಿ.ರಾಮರಾವ್ ಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದು, ಕೆಟಿಆರ್ ಟ್ವೀಟ್ ಹಾಸ್ಯಾಸ್ಪದ ಇಡೀ ಜಗತ್ತಿನ ಜನ ಬೆಂಗಳೂರಿಗೆ ಬರ್ತಿದ್ದಾರೆ. ಬರೀ ಭಾರತದ ಉದ್ಯಮಿಗಳಷ್ಟೇ ಬರುತ್ತಿಲ್ಲ. ಅತೀ ಹೆಚ್ಚು ಸ್ಟಾರ್ಟಪ್‍ಗಳು ಬೆಂಗಳೂರಿನಲ್ಲಿವೆ. ಅತೀ ಹೆಚ್ಚು ಎಫ್‍ಡಿಐ ಬೆಂಗಳೂರಿನಲ್ಲಿದೆ. ಕರ್ನಾಟಕದ ಕಳೆದ ಮೂರು ತ್ರೈಮಾಸಿಕಗಳ ಆರ್ಥಿಕತೆ ಹೆಚ್ಚಿನ ಮಟ್ಟದಲ್ಲಿದೆ. ಬೆಂಗಳೂರನ್ನು ಹೈದರಾಬಾದ್ ಗೆ, ಕರ್ನಾಟವನ್ನು ತೆಲಂಗಾಣಕ್ಕೆ ಹೋಲಿಸುವುದು ಹಾಸ್ಯಾಸ್ಪದ ಎಂದಿದ್ದಾರೆ.

ಆಡಳಿತ ಹಾಗೂ ವಿಪಕ್ಷ ನಾಯಕರುಗಳು ಪರ ವಿರುದ್ಧ ಹೇಳಿಕೆ ಮೂಲಕ ವಿವಾಧ ಮತ್ತಷ್ಟು ಜೋರಾಗಿಸಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ತೆಲಂಗಾಣ ಸಚಿವರಿಂದ ಕಂಪನಿಗೆ ಆಹ್ವಾನ ಬಂದಿದೆ. ತಪ್ಪೆನಿದೆ ಅವರು ಹೇಳಿದ್ದು ಮೊದಲು ನಿಮ್ಮ ಮನೆ ಸರಿಪಡಿಸಿಕೊಳ್ಳಿ ಅಂತ. ಮನೆ ಸರಿ ಇದ್ರೆ ಗಳ ಹಿರಿಯೋಕ್ಕೆ ಬರಲ್ಲ ಯಾರು ಯಾವುದೇ ಕಾರಣಕ್ಕೂ ತೆಲಂಗಾಣ ಮಿನಿಸ್ಟರ್ ಕರೆದಿದ್ದು ತಪ್ಪಲ್ಲ ಇನ್ವೆಸ್ಟರ್ಸ್ ಮೀಟ್ ಮಾಡಿ ಎಲ್ಲರು ಕರೆಯಲ್ಲ್ವಾ? ಎಂದಿದ್ದಾರೆ. ಒಟ್ಟಿನಲ್ಲಿ ತೆಲಂಗಾಣ ಸಚಿವರ ಟ್ವೀಟ್ ರಾಜ್ಯದ ಹಿತ ಬೆಂಗಳೂರಿನ ಗೌರವಕ್ಕೆ ಸವಾಲು ಹಾಕುವಂತಿದೆ.

Share This Article
Leave a Comment

Leave a Reply

Your email address will not be published. Required fields are marked *