– ಸಿಸಿಟಿವಿ, ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ಪರೀಕ್ಷೆ
ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಪರೀಕ್ಷೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 (SSLC Exam) ಇಂದಿನಿಂದ ಪ್ರಾರಂಭ ಆಗಲಿದೆ. ಪರೀಕ್ಷೆಗೆ ಎಕ್ಸಾಂ ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಕ್ರಮಗಳು ನಡೆಯದಂತೆ ಹದ್ದಿನ ಕಣ್ಣಿಟ್ಟಿದೆ.
ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರ ವರೆಗೆ ಪರೀಕ್ಷೆ ನಡೆಯಲಿದೆ. 8,65,988 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 7,75,979 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯಲಿದ್ದಾರೆ. 62,938 ಪುನರಾವರ್ತಿತ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. 2,870 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದನ್ನೂ ಓದಿ: ಜೆಡಿಎಸ್‌ನಲ್ಲಿ ಇದ್ದೀನಿ, ಮುಂದೆಯೂ ಇರ್ತೀನಿ – ಕ್ಷೇತ್ರದಲ್ಲಿ ಭಾವನಾತ್ಮಕ ದಾಳ ಪ್ರಯೋಗಿಸಿದ ಜಿಟಿಡಿ
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಶುಭಹಾರೈಸಿದ್ದಾರೆ. ಮಲ್ಲೇಶ್ವರಂ ಕರ್ನಾಟಕ ಪಬ್ಲಿಕ್ ಶಾಲೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ವಿಶ್ ಮಾಡಿದ್ದಾರೆ. ಪರೀಕ್ಷೆ ಚೆನ್ನಾಗಿ ಬರೆಯಿರಿ. ಭಯ ಬಿಟ್ಟು ಪರೀಕ್ಷೆ ಬರೆಯಿರಿ ಎಂದು ಸಲಹೆ ನೀಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ವೇಳಾಪಟ್ಟಿ
ಮಾರ್ಚ್ 18- ಪ್ರಥಮ ಭಾಷೆ ವಿಷಯಗಳು
ಮಾರ್ಚ್ 23- ವಿಜ್ಞಾನ
ಮಾರ್ಚ್ 25- ದ್ವೀತಿಯ ಭಾಷೆ
ಮಾರ್ಚ್ 28- ಗಣಿತ
ಮಾರ್ಚ್ 30- ತೃತೀಯ ಭಾಷೆ
ಏಪ್ರಿಲ್ 2- ಸಮಾಜ ವಿಜ್ಞಾನ
ಎಕ್ಸಾಂಗೆ ಬೋರ್ಡ್ ಹದ್ದಿನ ಕಣ್ಣು
* ಇಡೀ ಪರೀಕ್ಷಾ ಪ್ರಕ್ರಿಯೆ ವೆಬ್‌ಕಾಸ್ಟಿಂಗ್ ಕಣ್ಗಾವಲು.
* ಪರೀಕ್ಷೆ ನಡೆಯೋ ದಿನದಿಂದ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ.
* ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಕಂಪ್ಯೂಟರ್ ಶಾಪ್ ಕ್ಲೋಸ್‌ಗೆ ಕ್ರಮ.
* ಹಿಂದಿನ ಪರೀಕ್ಷೆಗಳಲ್ಲಿ ಅಕ್ರಮದಲ್ಲಿ ಭಾಗಿಯಾಗಿರೋ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆಯಿಂದ ವಿಶೇಷ ನಿಗಾ.
* ಪರೀಕ್ಷೆ ನಡೆಯೋ ಎಲ್ಲಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ.
* ಸುಳ್ಳು ಸುದ್ದಿ ಹರಡಿಸೋ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ನೇತೃತ್ವದಲ್ಲಿ ವಿಶೇಷ ತಂಡದ ರಚನೆ.
* ಇಡೀ ಪರೀಕ್ಷಾ ವ್ಯವಸ್ಥೆ ಮಾನಿಟರ್ ಮಾಡಲು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ. ಪ್ರತಿ ಜಿಲ್ಲೆ ಡಿಸಿಗಳು, ಎಸ್ಪಿಗಳು ಮಾನಿಟರ್ ಮಾಡಲು ವ್ಯವಸ್ಥೆ.
* ಪ್ರಶ್ನೆ ಪತ್ರಿಕೆ ಖಜಾನೆಯಿಂದ ಕೇಂದ್ರಗಳಿಗೆ ಹೋಗೋವಾಗ ಬಿಗಿ ಪೊಲೀಸ್ ಭದ್ರತೆ. ಪ್ರಶ್ನೆ ಪತ್ರಿಕೆ ರವಾನೆ ವಿಡಿಯೋ ಚಿತ್ರೀಕರಣದ ವ್ಯವಸ್ಥೆ.
* ನಿಗದಿ ಮಾಡಿದ ಸಮಯಕ್ಕಿಂತ ಮೊದಲು ಪ್ರಶ್ನೆ ಪತ್ರಿಕೆ ಖಜಾನೆಯಿಂದ ಓಪನ್ ಮಾಡುವಂತೆ ಇಲ್ಲ. ಅಂತಹ ಘಟನೆ ಕಂಡು ಬಂದ್ರೆ ಜವಾಬ್ದಾರಿ ಕೊಟ್ಟಿರುವವರ ಮೇಲೆ ಕಾನೂನು ಕ್ರಮ.
* ಪ್ರಶ್ನೆ ಪತ್ರಿಕೆ ಜವಾಬ್ದಾರಿವಹಿಸಿ ಅಕ್ರಮದಲ್ಲಿ ಭಾಗಿಯಾದ್ರೆ ಕಾನೂನು ಕ್ರಮಕ್ಕೆ ಎಚ್ಚರಿಕೆ.
* ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿಗೆ, ಅಧಿಕಾರಿಗಳಿಗೆ ಸಂಪೂರ್ಣ ಫೋನ್ ನಿಷೇಧ.
* ಪರೀಕ್ಷಾ ಕೇಂದ್ರಗಳಿಗೆ ವಾಚ್ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ.
* ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಭದ್ರತೆ. ಜಿಲ್ಲೆಗಳಲ್ಲಿ ಎಸ್ಪಿ, ಡಿಸಿಗಳ ನೇತೃತ್ವದಲ್ಲಿ ಭದ್ರತೆ.
* ಪ್ರತಿ ಕೇಂದ್ರದಲ್ಲಿ ಸಿಟ್ಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್ ನಿಯೋಜನೆ. ಪ್ರತಿ ಕೇಂದ್ರದಲ್ಲಿ ಪೊಲೀಸರ ವ್ಯವಸ್ಥೆ.

