ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭ

Public TV
2 Min Read

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಲಿದೆ. ಪರೀಕ್ಷೆಗೆ ಎಸ್‍ಎಸ್‍ಎಲ್‍ಸಿ ಬೋರ್ಡ್ ಸಕಲ ಸಿದ್ಧತೆ ಮುಗಿಸಿದ್ದು, ಸ್ಕ್ವಾಡ್‍ನ ಹದ್ದಿನ ಕಣ್ಣಿಡಲಾಗಿದೆ. ಇಂದಿನಿಂದ ಏಪ್ರಿಲ್ 4ರವರೆಗೆ ಪರೀಕ್ಷೆಗಳು ನಡೆಯಲಿದೆ. ಮೊದಲ ದಿನವಾದ ಇಂದು ಪ್ರಥಮ ಭಾಷೆ ವಿಷಯಗಳ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿದ್ರೆ ಬಸ್ ಗಳಲ್ಲಿ ಉಚಿತ ಸಂಚಾರ ಸಿಗಲಿದೆ.

ಈ ಬಾರಿ ಒಟ್ಟು 8 ಲಕ್ಷದ 41 ಸಾವಿರದ 666 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 4 ಲಕ್ಷದ 47 ಸಾವಿರದ 864 ಬಾಲಕರು ಹಾಗೂ 3 ಲಕ್ಷದ 93 ಸಾವಿರದ 802 ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯಾದ್ಯಂತ 2857 ಪರೀಕ್ಷೆ ಕೇಂದ್ರಗಳಿದ್ದು, 46 ಸೂಕ್ಷ್ಮ ಕೇಂದ್ರಗಳು ಮತ್ತು 7 ಅತಿ ಸೂಕ್ಷ್ಮ ಕೇಂದ್ರಗಳಿವೆ. ಇದಲ್ಲದೆ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಬಿಗಿ ಭದ್ರತೆ ಮಾಡಲಾಗಿದ್ದು, ಸ್ಕ್ವಾಡ್‍ಗಳನ್ನ ನೇಮಿಸಲಾಗಿದೆ. ಎಲ್ಲಾ ಕೇಂದ್ರಗಳಿಗೂ ಸಿಸಿಟಿವಿ ಹಾಕಿ ಹದ್ದಿನ ಕಣ್ಣು ಇಡಲಾಗಿದೆ.

ಪರೀಕ್ಷಾ ಕೇಂದ್ರದ ಭದ್ರತೆ:
* ಪರೀಕ್ಷಾ ಅಕ್ರಮ ತಡೆಯಲು 2847 ಮುಖ್ಯ ಅಧೀಕ್ಷಕರು ಮತ್ತು 715 ಉಪ ಮುಖ್ಯ ಅಧೀಕ್ಷಕರು ನೇಮಕ.
* ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಾಗೃತದಳ ನೇಮಕ
* ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ನಿಷೇದಾಜ್ಞೆ ಜಾರಿ ಮಾಡಲಾಗಿದೆ
* ಪರೀಕ್ಷಾ ಸಮಯದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮವಹಿಸಲಾಗಿದೆ.
* ಪ್ರಶ್ನೆ ಪತ್ರಿಕೆ ಕೊಠಡಿಗೆ 247 ಪೊಲೀಸ್ ಭದ್ರತೆ ವ್ಯವಸ್ಥೆ.
* ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಅಳವಡಿಕೆ.
*. ಪರೀಕ್ಷಾ ಕೇಂದ್ರಕ್ಕೆ ಸ್ಮಾರ್ಟ್ ಫೋನ್, ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ ನಿಷೇಧ.

ಏಪ್ರಿಲ್ 10ರಿಂದ ಮೌಲ್ಯಮಾಪನ ನಡೆಯಲಿದ್ದು ಸುಮಾರು 77 ಸಾವಿರ ಶಿಕ್ಷಕರು ಮೌಲ್ಯಮಾಪನ ಮಾಡಲಿದ್ದಾರೆ. ಮೌಲ್ಯಮಾಪನಕ್ಕೆ 230 ಮೌಲ್ಯಮಾಪನ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಏಪ್ರಿಲ್ ಕೊನೆ ವಾರ ಫಲಿತಾಂಶ ಪ್ರಕಟಗೊಳ್ಳಲಿದೆ. ಪ್ರಶ್ನೆ ಪತ್ರಿಕೆ ಲೀಕ್ ಆಗದಂತೆ ಎಲ್ಲಾ ಸಿದ್ಧತೆ ಮಾಡಿದ್ದು, ಗೃಹ ಇಲಾಖೆ ಭದ್ರತೆಯ ನೇತೃತ್ವವಹಿಸಿದೆ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಕಡೆಯಿಂದ ಆಲ್ ದಿ ಬೆಸ್ಟ್.

Share This Article
Leave a Comment

Leave a Reply

Your email address will not be published. Required fields are marked *