SSLC ಪರೀಕ್ಷೆ ಬಗ್ಗೆ ಭಯ ಬೇಡ – ಎರಡು ದಿನ ಎರಡೇ ಪೇಪರ್

Public TV
3 Min Read

ಚಿಕ್ಕಬಳ್ಳಾಪುರ: ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಹಾಗಂತ ವಿದ್ಯಾರ್ಥಿಗಳು ಪರೀಕ್ಷಾ ಪೂರ್ವ ಅಭ್ಯಾಸ ಮಾಡಲು ನಿರ್ಲಕ್ಷ್ಯ ವಹಿಸಬಾರದು. ಕಠಿಣ ಅಭ್ಯಾಸ ಮಾಡಿ ಎಲ್ಲರೂ ‘ಎ+’ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾರವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾನ್ಯ ಶಿಕ್ಷಣ ಸಚಿವರು ಮತ್ತು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು 2021ರ ಜುಲೈ 3ನೇ ವಾರದಲ್ಲಿ ನಡೆಸುವುದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಸದರಿ ಪರೀಕ್ಷೆ ನಡೆಸುವ ವಿಧಾನ ಮತ್ತು ನೂತನ ಪರೀಕ್ಷಾ ಪದ್ಧತಿಯಲ್ಲಿನ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ 17,002 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಹಾಗಂತ ವಿದ್ಯಾರ್ಥಿಗಳು ಪರೀಕ್ಷಾ ಪೂರ್ವ ಅಭ್ಯಾಸ ಮಾಡಲು ನಿರ್ಲಕ್ಷ್ಯ ವಹಿಸಬಾರದು. ಕಠಿಣ ಅಭ್ಯಾಸ ಮಾಡಿ ಎಲ್ಲರೂ ‘ಎ+’ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿ ಮಕ್ಕಳ ಅಭ್ಯಾಸ ಕ್ರಮವನ್ನು ಸಂಪರ್ಕ ವ್ಯವಸ್ಥೆ ಇರುವವರಿಗೆ ಆನ್ ಲೈನ್ ಮುಖಾಂತರವೇ ಪರಿಶೀಲಿಸಿ ಬೋಧನೆ ಮಾಡಬೇಕು. ಆನ್ ಲೈನ್ ಸಂಪರ್ಕ ವ್ಯವಸ್ಥೆ ಇಲ್ಲದ ಮಕ್ಕಳಿಗೆ ನೇರವಾಗಿ ಕೋವಿಡ್‍ನ ಸಮುಚಿತ ಮಾರ್ಗದಲ್ಲಿ ಭೇಟಿ ಮಾಡಿ ಬೋಧಿಸುವ ಮೂಲಕ ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕು, ಶಿಕ್ಷಕರ ಕಾರ್ಯವೈಖರಿಯನ್ನು ಅವರ ಮೇಲಧಿಕಾರಿಗಳು ನಿಗಾವಹಿಸಬೇಕು ಎಂದು ತಿಳಿಸಿದ್ದಾರೆ.

2 ದಿನಗಳ ಪರೀಕ್ಷೆ ಎರಡೇ ಪೇಪರ್: ಒಂದು ದಿನ ಭಾಷಾ ವಿಷಯಗಳು (ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ) ಮತ್ತೊಂದು ದಿನ ಕೋರ್ ವಿಷಯಗಳಲ್ಲಿ ( ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ಪರೀಕ್ಷೆ ನಡೆಯಲಿದೆ. ಪ್ರತಿ ವಿಷಯಕ್ಕೆ 40 ಅಂಕಗಳ ಬಹು ಆಯ್ಕೆ ಪ್ರಶ್ನೆಗಳಿದ್ದು, ಭಾಷಾ ವಿಷಯಗಳ ಪ್ರಶ್ನೆ ಪತ್ರಿಕೆಯು ಒಟ್ಟು 120 ಅಂಕಗಳನ್ನು ಒಳಗೊಂಡಿರುತ್ತದೆ. (ಒಂದು ಪ್ರಶ್ನೆಗೆ ಒಂದು ಅಂಕ, ಪರೀಕ್ಷಾ ಅವಧಿ-3 ಗಂಟೆ) ಅದೇ ರೀತಿ ಕೋರ್ ವಿಷಯಗಳಲ್ಲೂ ಪ್ರತಿ ವಿಷಯಕ್ಕೆ 40 ಬಹು ಆಯ್ಕೆ ಪ್ರಶ್ನೆಗಳಿದ್ದು, ಕೋರ್ ವಿಷಯಗಳ ಪ್ರಶ್ನೆ ಪತ್ರಿಕೆಯು ಒಟ್ಟು 120 ಅಂಕಗಳನ್ನು ಒಳಗೊಂಡಿರುತ್ತದೆ. (ಒಂದು ಪ್ರಶ್ನೆಗೆ ಒಂದು ಅಂಕ, ಪರೀಕ್ಷಾ ಅವಧಿ-3 ಗಂಟೆ), ಪ್ರಶ್ನೆ ಪತ್ರಿಕೆಗಳು ಬಹು ಅಂಶ ಮಾದರಿ ಮತ್ತು ಸರಳ ನೇರ ಮಾದರಿ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯಕ್ಕೂ ಸಂಬಂಧಿಸಿದಂತೆ ಪ್ರತ್ಯೇಕ ಒ.ಎಂ.ಆರ್. ಶೀಟ್ ಇದ್ದು, ಬೇರೆ ಬೇರೆ ಬಣ್ಣದ ಒ.ಎಂ.ಆರ್.ಗಳಿರುತ್ತದೆ. ಇದನ್ನೂ ಓದಿ:  SSLC ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಒಂದು ಪರೀಕ್ಷಾ ಕೊಠಡಿಯಲ್ಲಿ ಕನಿಷ್ಟ 12 ವಿದ್ಯಾರ್ಥಿಗಳಿರುವಂತೆ ಮತ್ತು ಡೆಸ್ಕ್ ಗಳ 6 ಅಡಿ ಅಂತರವಿರುವಂತೆ ಆಸನ ವ್ಯವಸ್ಥೆ ಮಾಡಲಾಗಿರುತ್ತದೆ. ಹಾಗೂ 1 ಡೆಸ್ಕ್ ಗೆ ಒಬ್ಬವಿದ್ಯಾರ್ಥಿಗೆ ಅವಕಾಶ ಕಲ್ಪಿಸಿ ಕೋವಿಡ್-19ರ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಮುನ್ನಚ್ಚರಿಕೆಯ ಕ್ರಮವಾಗಿ ಒಂದು ಕೊಠಡಿಯನ್ನು ಕಾಯ್ದಿರಿಸಿದ್ದು, ಕೋವಿಡ್ ವಿಶೇಷ ಕೊಠಡಿಯನ್ನು ಒಳಗೊಂಡಿರುತ್ತದೆ. ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಹೆಲ್ಪ್ ಡೆಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಯ್ಕಾನರ್ ಒಳಗೊಂಡಿರುವಂತೆ ಕೋವಿಡ್-19ರ ಎಸ್.ಒ.ಪಿ.ಯಂತೆ ಪರೀಕ್ಷಾ ಸ್ನೇಹಿ ವಾತಾವರಣವಿರುವ ಪರೀಕ್ಷಾ ಕೇಂದ್ರಗಳನ್ನು ಈಗಾಗಲೇ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ನೂತನ ಪರೀಕ್ಷಾ ಪದ್ದತಿಯಂತೆ ಪರೀಕ್ಷೆಯು ನಿಶ್ಚಯವಾಗಿ ನಡೆಯಲಿದ್ದು, ಯಾವುದೇ ವಿದ್ಯಾರ್ಥಿಯೂ ಸಹ ಗೈರು ಹಾಜರಾಗದೆ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಒ.ಎಂ.ಆರ್. ಶೀಟ್ ನಲ್ಲಿ ತಮ್ಮ ಪ್ರವೇಶ ಪತ್ರದ ಸಂಖ್ಯೆಯನ್ನು ಸರಿಯಾಗಿ ನಮೂದಿಸಬೇಕು. ಕೋವಿಡ್‍ನ ಸಮುಚಿತ ಮಾರ್ಗದಲ್ಲಿ ಎಲ್ಲರೂ ಭಾಗವಹಿಸಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಯಶಸ್ವಿಗೊಳಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ಮಾಡಿ ಧೈರ್ಯ ತುಂಬುವಂತೆ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಎಂ ಜಯರಾಮರೆಡ್ಡಿ ಹಾಗೂ ಎಲ್ಲಾ ತಾಲುಕುಗಳ ಬಿ,ಇ,ಒಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಬೇಡಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Share This Article
Leave a Comment

Leave a Reply

Your email address will not be published. Required fields are marked *