ಕನ್ನಡದಲ್ಲಿಯೇ ಧನ್ಯವಾದ ಅರ್ಪಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದ ರಾಜಮೌಳಿ

Public TV
3 Min Read

ಹೈದರಾಬಾದ್: ಬಾಹುಬಲಿ ಖ್ಯಾತಿಯ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿಯವರು ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕ ಹೆಸರುವಾಸಿ, ಸದಾ ವಿಭಿನ್ನ ಆಲೋಚನೆ ಉನ್ನತ ಮಟ್ಟದ ಸಿನಿಮಾ ಮಾಡುವ ಅವರ ತುಡಿತ ನಿಬ್ಬೆರಗಾಗುವಂತೆ ಮಾಡಿದೆ. ಇದೀಗ ಅವರ ಮುಂದಿನ ಆರ್‍ಆರ್‍ಆರ್ ಸಿನಿಮಾ ಸಹ ಸೆಟ್ಟೇರಿದ್ದು, ಈ ಸಿನಿಮಾ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.

ಎಸ್.ಎಸ್.ರಾಜಮೌಳಿ ಅವರ ಆರ್‍ಆರ್‍ಆರ್ ಸಿನಿಮಾ ಈಗಾಗಲೇ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಭಾರೀ ನಿರೀಕ್ಷೆ, ಕುತೂಹಲವನ್ನು ಹುಟ್ಟುಹಾಕಿದೆ. ಇದರ ಮಧ್ಯೆಯೇ ರಾಮ್ ಚರಣ್‍ತೇಜಾ ಅವರ ಹುಟ್ಟುಹಬ್ಬಕ್ಕೆ ‘ಕೊಮರಂ ಭೀಮ್’ ಟೀಸರ್ ಬಿಡುಗಡೆ ಮಾಡಿದ್ದು, ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟೀಸರ್ ಕನ್ನಡದಲ್ಲಿಯೂ ಬಿಡುಗಡೆಯಾಗಿತ್ತು. ಇದಾದ ಬೆನ್ನಲ್ಲೇ ಈ ಕನ್ನಡ ಟೀಸರ್‍ಗೆ ಸ್ವತಃ ಜೂನಿಯರ್ ಎನ್‍ಟಿಆರ್ ತಾವೇ ಧ್ವನಿ ನೀಡಿದ್ದು ಎಂಬುದು ತಿಳಿಯಿತು. ಇದು ಕನ್ನಡಿಗರಿಗೆ ಇನ್ನೂ ಹೆಚ್ಚು ಖುಷಿ ಕೊಟ್ಟಿದೆ. ಈ ಮೂಲಕ ಚಿತ್ರ ತಂಡ ಸಹ ಕನ್ನಡದ ಮೇಲೆ ಎಷ್ಟು ಒಲವು ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಹೀಗಾಗಿ ಕನ್ನಡಿಗರು ಸಹ ಅಷ್ಟೇ ಪ್ರೀತಿಯನ್ನು ತೋರಿಸುತ್ತಿದ್ದಾರೆ.

ನಿರ್ದೇಶಕ ರಾಜಮೌಳಿ ಮೂಲತಃ ಕನ್ನಡಿಗರು, ರಾಯಚೂರಿನ ಮಾನ್ವಿ ಅವರು ಎಂಬುದು ತಿಳಿದಿರುವ ವಿಚಾರ. ಹೀಗಾಗಿ ಅವರು ಕರ್ನಾಟಕ ಹಾಗೂ ಕನ್ನಡದ ಮೇಲೆ ವಿಶೇಷವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ ಸಹ. ಹೀಗಾಗಿಯೇ ಇದೀಗ ಕನ್ನಡಿಗರಿಗೆ ಕನ್ನಡದಲ್ಲಿಯೇ ಧನ್ಯವಾದ ಹೇಳಿದ್ದಾರೆ. ನಟ ರಾಮ್ ಚರಣ್ ‘ಆರ್‍ಆರ್‍ಆರ್’ ಸಿನಿಮಾದಲ್ಲಿ ‘ಕೊಮರಂ ಭೀಮ್’ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಪಾತ್ರ ಯಾವ ರೀತಿ ಇರಲಿದೆ ಎಂಬ ಬಗ್ಗೆ ಸಣ್ಣ ಪರಿಚಯವನ್ನು ಈ ಟೀಸರ್ ನಲ್ಲಿ ನೀಡಲಾಗಿದೆ.

ರಾಮ್ ಚರಣ್ ಅವರ ‘ಕೊಮರಂ ಭೀಮ್’ ಟೀಸರ್ ಭರ್ಜರಿ ಹಿಟ್ ಆಗಿದ್ದರಿಂದ ರಾಜಮೌಳಿ ಖುಷಿಯಾಗಿದ್ದಾರೆ. ಕನ್ನಡ ವರ್ಷನ್ ಟೀಸರ್‍ನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ‘ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು’ ಎಂದು ಕನ್ನಡದಲ್ಲೇ ಬರೆದುಕೊಂಡಿದ್ದಾರೆ. ಇದನ್ನು ಕಂಡ ಕನ್ನಡಿಗರು ಖುಷಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ, ಎಲ್ಲ ಭಾಷೆಯ ಸಿನಿಪ್ರಿಯರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಈ ಸಿನಿಮಾ ಕನ್ನಡ, ತೆಲುಗು, ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅಂತೆಯೇ ರಾಮ್ ಚರಣ್ ಬರ್ತ್ ಡೇಗೆ ಬಿಡುಗಡೆಯಾದ ‘ಕೊಮರಂ ಭೀಮ್’ ಟೀಸರ್ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಆ ಟೀಸರ್‍ಗೆ ನಟ ಜೂ.ಎನ್‍ಟಿಆರ್ ಕನ್ನಡದಲ್ಲೇ ಧ್ವನಿ ನೀಡಿದ್ದು, ‘ಇವನ್ನ ಕಂಡರೆ ಕಾಡ್ಗಿಚ್ಚು ನಿಂತಿರುವಂಗೆ ಕಾಣ್ತದೆ, ಎದುರಿಗೆ ನಿಂತರೆ ಬರ ಸಿಡಿಲು ಮೇಲೆ ಬಿದ್ದಂಗಾಯ್ತದೆ, ಸಾವಿಗೆ ಕೂಡ ಬೆವರು ಸುರಿದಂಗಾಯ್ತದೆ….ಬಾಳಾಗಲಿ ಬಂದೂಕಾಗಲಿ ಅವನ ಮಾತೇ ಕೇಳ್ತದೆ….ಎಂಬ ಖಡಕ್ ಡೈಲಾಗ್ ಕನ್ನಡ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ.

ರಾಜಮೌಳಿಯವರ ಫೇಸ್ಬುಕ್ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ಸಹ ನಿಮ್ಮ ಹೆಚ್ಚು ಅಭಿಮಾನಿಗಳಿದ್ದಾರೆ. ನೀವು ಭಾರತ ಸಿನಿಮಾ ರಂಗದ ಹೆಮ್ಮೆ. ಕನ್ನಡದಲ್ಲಿ ಡಬ್ ಮಾಡುತ್ತಿರುವುದಕ್ಕೆ ಧನ್ಯವಾದ, ವಿಯ್ ಆರ್ ಲವ್ ಯು ಸರ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ, ಜೂನಿಯರ್ ಎನ್‍ಟಿಆರ್ ವಾಯ್ಸ್ ತುಂಬಾ ಚೆನ್ನಾಗಿದೆ. ಅವರ ಧ್ವನಿ ಕನ್ನಡಕ್ಕೆ ಹೊಂದಿಕೊಳ್ಳುತ್ತದೆ. ಅವರ ತಾಯಿ ಸಹ ಕುಂದಾಪುರದವರೆಂದು ಗೊತ್ತು. ಹೀಗಾಗಿ ಅವರಿಗೆ ಸೂಟ್ ಆಗುತ್ತಿದೆ. ನನಗೆ ಇಷ್ಟವಾಯಿತು ಎಂದು ತಿಳಿಸಿದ್ದಾರೆ. ಇನ್ನೂ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇನ್ನೂ ವಿಶೇಷ ಎಂಬಂತೆ ‘ಈಗ’ ಖ್ಯಾತಿಯ ನಿರ್ಮಾಪಕ ಹಾಗೂ ರಾಜಮೌಳಿಯ ಆಪ್ತ ಸಾಯಿ ಕೊರ್ರಪಟಿ ‘ಆರ್‍ಆರ್‍ಆರ್’ ಕನ್ನಡ ವರ್ಷನ್ ಅನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲಿದ್ದಾರಂತೆ.

Share This Article
Leave a Comment

Leave a Reply

Your email address will not be published. Required fields are marked *