ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ- ಕೋರ್ಟ್ ಅಂಗಳಕ್ಕೆ ಕೊಂಡೊಯ್ಯಲು ಸಿದ್ಧತೆ

Public TV
2 Min Read

ಮಂಡ್ಯ: ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯಲ್ಲಿ ಡ್ರೋನ್ ಸರ್ವೇಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶವು ಮೂರನೇ ದಿನಕ್ಕೆ ಒಂದು ಕಡೆ ಕಾಲಿಟ್ಟರೇ, ಇತ್ತ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ವಿವಾದವನ್ನು ಕೋರ್ಟ್ ಮೆಟ್ಟಿಲಿಗೆ ಕೊಂಡೊಯ್ಯಲು ಸಕಲ ಸಿದ್ಧತೆಗಳು ನಡೆಯುತ್ತಿವೆ.

ಸಕ್ಕರೆ ನಾಡು ಮಂಡ್ಯ ಜಿಲ್ಲೆ ಸದಾ ಒಂದೆಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತದೆ. ಇದೀಗ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ವಿವಾದದ ಮೂಲಕ ಸುದ್ದಿಯಾಗುತ್ತಿದೆ. ಜಾಮಿಯಾ ಮಸೀದಿ ಹಿಂದೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು. 1784ರಲ್ಲಿ ದೇವಸ್ಥಾನವನ್ನು ಒಡೆದು ಟಿಪ್ಪು ಸುಲ್ತಾನ್ ಈ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಹೀಗಾಗಿ ಈ ಮಸೀದಿಯ ಜಾಗದಲ್ಲಿ ಮತ್ತೆ ಮೂಡಲಬಾಗಿಲು ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಹಿಂದೂ ಸಂಘಟನೆಗಳು ಆಗ್ರಹ ಮಾಡುತ್ತಿವೆ.

ಈ ಜಾಗದಲ್ಲಿ ಹಿಂದೂ ದೇವಸ್ಥಾನ ಇತ್ತೆಂದು ಇಲ್ಲಿರುವ ಹಿಂದೂ ದೇವಸ್ಥಾನದ ರೀತಿಯ ಕೆತ್ತನೆಗಳು, ಕಂಬಗಳು, ಕಲ್ಯಾಣಿ, ಗೋಪುರದ ಕಲಶವೇ ಹೇಳುತ್ತಿವೆ. ಹೀಗಾಗಿ ಇಲ್ಲಿ ಆಂಜನೇಯಸ್ವಾಮಿ ಪ್ರತಿಷ್ಠಾಪನೆಯಾಗಬೇಕೆಂದು ಈಗಾಗಲೇ ನರೇಂದ್ರ ಮೋದಿ ವಿಚಾರ ಮಂಚ್ ವೇದಿಯ ಪದಾಧಿಕಾರಿಗಳು ಮಂಡ್ಯ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಟಿಪ್ಪು ಸುಲ್ತಾನ್ ತನ್ನ ಆಡಳಿತದಲ್ಲಿ ಇಲ್ಲಿದ್ದ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಒಡೆದು ಜಾಮಿಯಾ ಮಸೀದಿಯನ್ನು ಕಟ್ಟಿರುವುದು, ಇಲ್ಲಿರುವ ದೇವಸ್ಥಾನಗಳ ಕುರುಹುಗಳನ್ನು ಗಮನಿಸಿದರೆ ತಿಳಿಯುತ್ತದೆ. ಹೀಗಾಗಿ ಕೋರ್ಟ್ ಮೆಟ್ಟಿಲು ಏರಲು ಹಿಂದೂ ಸಂಘಟನೆಗಳು ನಿರ್ಧಾರ ಮಾಡಿವೆ.

ನರೇಂದ್ರ ಮೋದಿ ವಿಚಾರ ಮಂಚ್‍ನ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದ ಹಾಗೆ ಇತ್ತ ಹಿಂದೂ ಸಂಘಟನೆಗಳ ಮುಖಂಡರು ಸಹ ಈ ಬಗ್ಗೆ ಧ್ವನಿಗೂಡಿಸಿ ಹೋರಾಟ ಮಾಡಲು ರೂಪುರೇಷೆ ಸಿದ್ಧಪಡಿಸುತ್ತಿರುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಂದೂಸ್ತಾನದಲ್ಲಿ ಕೇಸರಿ ಆಡಳಿತ ನಡೆಸುತ್ತೆ: ದೇವೇಂದ್ರ ಫಡ್ನವೀಸ್

ಬೀದಿಗಿಳಿದು ಹೋರಾಟ ಮಾಡುವುದು ಒಂದು ಕಡೆಯಾದರೆ ಇತ್ತ ಕಾನೂನು ಹೋರಾಟ ಮಾಡಲು ಸಹ ಹಿಂದೂ ಪರ ಸಂಘಟನೆಗಳು ಸಜ್ಜಾಗುತ್ತಿವೆ. ಈಗಾಗಲೇ ಬಾಬ್ರಿ ಮಸೀದಿ, ವಾರಣಾಸಿಯ ಜ್ಞಾನವ್ಯಾಪಿ ಮಸೀದಿ ವಿವಾದ ಕೋರ್ಟ್‍ಗೆ ಬಗೆಹರಿಯುವ ಮಟ್ಟಕ್ಕೆ ತಲುಪಿವೆ. ಹೀಗಾಗಿ ಜಾಮಿಯಾ ಮಸೀದಿಯ ವಿವಾದವನ್ನು ನ್ಯಾಯಾಲಯದ ಸಮ್ಮುಖದಲ್ಲೇ ಬಗೆಹರಿಸಿಕೊಳ್ಳುತ್ತೇವೆಂಬ ನಿರ್ಧಾರಕ್ಕೆ ಹಿಂದೂಪರ ಸಂಘಟನೆಗಳು ಬಂದಿವೆ. ಈ ವಿವಾದವನ್ನು ಏಕಾಏಕಿ ಹೈಕೋರ್ಟ್‍ಗೆ ತೆಗೆದುಕೊಂಡು ಹೋಗಲು ಭಜರಂಗ ಸೇನೆ ಸಜ್ಜಾಗಿದ್ದು, ಈಗಾಗಲೇ ಈ ಕುರಿತು ವಕೀಲರ ಜೊತೆಗೂ ಮಾತುಕತೆ ನಡೆಸಿದೆ.

ಈ ಬಗ್ಗೆ ಮಾತನಾಡಿದ ಭಜರಂಗ ಸೇನೆ ಕಾರ್ಯಕರ್ತರು ವಕೀಲರ ಸಲಹೆಯಂತೆ ಮೊದಲಿಗೆ ಪುರಾತತ್ವ ಇಲಾಖೆಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮಸೀದಿ ಹಿಂದೂಗಳಿಗೆ ಸೇರಬೇಕೆಂದು ಸಾಕ್ಷಿ ಸಮೇತ ಪತ್ರ ಬರೆಯಲಾಗುತ್ತದೆ. ಸರ್ಕಾರದಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ತಿಳಿದಿದೆ. ಹೀಗಾಗಿ ನಂತರ ನಾವು ಹೈಕೋರ್ಟ್‍ಗೆ 1001 ಹಿಂದೂ ಕಾರ್ಯಕರ್ತರು ದಾವೆಯನ್ನು ಹಾಕುತ್ತೇವೆ. ಈ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ

ಭಾರತದ ಪುರಾತತ್ವ ಇಲಾಖೆಯ 1935ರ ಸರ್ವೇಯಲ್ಲಿ ಈ ಹಿಂದೆ ಜಾಮಿಯಾ ಮಸೀದಿಯ ಮೊದಲು ದೇವಸ್ಥಾನವಾಗಿತ್ತು ಎಂದು ಉಲ್ಲೇಖವಾಗಿರುವ ಸಾಕ್ಷಿಯೂ ದೊರೆತಿದೆ. ಇದಲ್ಲದೇ ಮತ್ತಷ್ಟು ಸಾಕ್ಷಿಗಾಗಿ ಮೈಸೂರು ಗೆಜೆಟ್ ಮೂಲಕ ಪಡೆದುಕೊಳ್ಳುತ್ತಿದ್ದೇವೆ. ಸರ್ಕಾರಕ್ಕೆ ಒಂದಷ್ಟು ಮಾಹಿತಿಗಳನ್ನು ಒದಗಿಸಿಕೊಡುವಂತೆ ಆರ್‌ಟಿಐನಲ್ಲಿ ಕೇಳಿದ್ದೇವೆ. ಈ ಎಲ್ಲಾ ಸಾಕ್ಷ್ಯಗಳು ಸಿಕ್ಕ ನಂತರ ಮಸೀಯದಲ್ಲಿರುವ ಹಿಂದೂ ದೇವಸ್ಥಾನದ ಕುರುಹುಗಳನ್ನು ವೀಡಿಯೋ ಮತ್ತು ಫೋಟೋ ಸಾಕ್ಷಿಗಳನ್ನು ಇಟ್ಟುಕೊಂಡು ಕೆಲವೇ ದಿನಗಳಲ್ಲಿ ದಾವೆ ಹೂಡುತ್ತೇವೆಂದರು.

Share This Article
Leave a Comment

Leave a Reply

Your email address will not be published. Required fields are marked *