ರಾಹುಲ್‍ಗಿಂತ ನಾನೇ ಆಕ್ಟೀವ್- ದಾಖಲೆ ರಿಲೀಸ್ ಮಾಡಿ ಸಿದ್ದರಾಮಯ್ಯಗೆ ಶ್ರೀರಾಮುಲು ತಿರುಗೇಟು

Public TV
2 Min Read

ಬೆಂಗಳೂರು: ಲೋಕಸಭೆ ಕಲಾಪದಲ್ಲಿ ನಾನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತ ಆಕ್ಟೀವ್ ಆಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಶ್ರೀರಾಮುಲು ಅವರು ತಿರುಗೇಟು ಕೊಟ್ಟಿದ್ದಾರೆ.

ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ನಾನು ಮಾತನಾಡುವಾಗ ನೀವು ನಿದ್ದೆಯಲ್ಲಿದ್ದೀರಿ ಎಂದು ಅನಿಸುತ್ತದೆ. ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ರಾಜ್ಯದ ಪ್ರತಿನಿಧಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ನಾನು ಇದ್ದೇನೆ. 16ನೇ ಲೋಕಸಭೆಯ 20 ಚರ್ಚೆಯಲ್ಲಿ ಭಾಗವಹಿಸಿ, 572 ಪ್ರಶ್ನೆ ಕೇಳಿದ್ದೇನೆ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇವಲ 12 ಚರ್ಚೆಯಲ್ಲಿ ಭಾಗವಹಿಸಿದ್ದರೂ, ಒಂದು ಪ್ರಶ್ನೆಯನ್ನು ಕೂಡ ಕೇಳಿಲ್ಲ ಎಂದು ಬರೆದು ಶ್ರೀರಾಮುಲು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಶಾಂತಾ ಅವರೂ ಈ ಹಿಂದೆ ಲೋಕಸಭೆಯಲ್ಲಿ ಮಾತನಾಡಿಲ್ಲ. ಅಲಂಕಾರಕ್ಕೆ ಅವರನ್ನು ಅಲ್ಲಿಗೆ ಕಳುಹಿಸಬೇಕೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

ರೈತರ ಸಾಲ ಮನ್ನಾ ಮಾಡಿ ಎಂದು ಶ್ರೀರಾಮುಲು ಒಂದು ದಿನವೂ ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ. ಕನ್ನಡವೇ ಸರಿಯಾಗಿ ಮಾತನಾಡಲು ಬಾರದವರು ನಾಡಿನ ಪರವಾಗಿ ಏನು ಮಾತನಾಡಿಯಾರು? ರಾಜ್ಯ, ದೇಶ ಗೊತ್ತಿಲ್ಲದವರು ಲೋಕಸಭೆಗೆ ಏಕೆ ಹೋಗಬೇಕು? ನಮ್ಮ ಪಕ್ಷದ ಅಭ್ಯರ್ಥಿ ಉಗ್ರಪ್ಪನವರಿಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮೊಂದಿಗೆ ಕೈಜೋಡಿಸಿ ಎಂದು ಮಾಜಿ ಸಿಎಂ ಮನವಿ ಮಾಡಿದ್ದರು.

ಶ್ರೀರಾಮುಲುಗೆ 371 ಜೆ ಅಂದರೆ ಏನು ಅಂತಲೇ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು 326, 307, 323, 420 ಮಾತ್ರ. ಇಂಥವರಿಗೆ ಮತ ನೀಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ? ಈ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಸೇರಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಇಂಥವರನ್ನು ಅಧಿಕಾರದಿಂದ ದೂರವಿಡಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

ಶ್ರೀರಾಮುಲು ಅವರಿಗೆ ಹೋಲಿಸಿದರೆ ರಾಜಕೀಯದಲ್ಲಿ ಉಗ್ರಪ್ಪ ಅವರದ್ದು ಮೇರು ವ್ಯಕ್ತಿತ್ವ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಯಾವುದೂ ರಾಮುಲು ಅವರಿಗೆ ಗೊತ್ತಿಲ್ಲ. ಹಣ, ಅಹಂಕಾರದಿಂದ ಅವರು ರಾಜಕೀಯ ನಡೆಸುವವರು ಅವರು. ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಶ್ರೀರಾಮುಲು ಒಂದಾದರೂ ಯೋಜನೆಯನ್ನು ಬಳ್ಳಾರಿಗೆ ತಂದಿದ್ದಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *