ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು

Public TV
3 Min Read

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಾಯಶಃ ಈ ಜಿಲ್ಲೆ ಜನ ಯಾವಾಗ ಎದ್ದು ನಿಲ್ಲುತ್ತಾರೋ ಗೊತ್ತಿಲ್ಲ. ಈ ಜಿಲ್ಲೆ ಬಿಟ್ಟು ತೊಲಗಬೇಕು ಎನ್ನುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಹುದು ಎಂದು ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಉಳಿದಿದೆ ಅಂದರೆ ಅದು ಎಸ್.ಆರ್ ಪಾಟೀಲ್ ಅವರಿಂದ ಎಂದು ನಾನು ತಿಳಿದುಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ಭೀಷ್ಮ ಅಂದು ಕೊಂಡಿರುವಂತಹ ಎಸ್.ಆರ್ ಪಾಟೀಲ್ ಅವರಿಗೆ ಟಿಕೆಟ್ ಸಿಗದಂತಹ ಕೆಲಸ ಮಾಡಿದ್ದು ಸಿದ್ದರಾಮಯ್ಯ. ಬಾಗಲಕೋಟೆ ಕಾಂಗ್ರೆಸ್ ಅಂದರೆ ನಮಗೆ ನೆನಪಾಗುವುದು ಎಸ್.ಆರ್ ಪಾಟೀಲ್ ಅವರು. ನಾವೆಲ್ಲ ಅವರನ್ನು ಈ ಭಾಗದ ಕಾಂಗ್ರೆಸ್ ಪಕ್ಷದ ಭೀಷ್ಮ ಎನ್ನುತ್ತೇವೆ. ಅಂತಹ ಪ್ರಾಮಾಣಿಕ ವ್ಯಕ್ತಿಗೆ ಟಿಕೆಟ್ ಸಿಗಬೇಕಿತ್ತು. ಆದರೆ ಷಡ್ಯಂತ್ರ ಮಾಡಿ ಸಿದ್ದರಾಮಯ್ಯ ಟಿಕೆಟ್ ತಪ್ಪಿಸಿದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ 10ಕ್ಕೂ ಹೆಚ್ಚು ಸಚಿವರು, 20ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ದೃಢ

ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಸ್ಪರ್ಧಿಸಲು ಅಪಸ್ವರ ಇತ್ತು. ಸಿದ್ದರಾಮಯ್ಯ ಇಲ್ಲಿಗೆ ಬರಬಾರದು. ಇಲ್ಲಿಗೆ ಬಂದರೆ ಜಿಲ್ಲೆಯ ರಾಜಕಾರಣ ಕೆಟ್ಟು ಹೋಗುತ್ತದೆ ಎಂಬ ಪರಿಸ್ಥತಿಯಲ್ಲಿ ಕೂಡ ಎಸ್.ಆರ್ ಪಾಟೀಲ್ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಮಾಜಿ ಸಚಿವ ಚಿಮ್ಮನಕಟ್ಟಿಯವರನ್ನು ಪಕ್ಷದಿಂದಲೇ ಆಚೆ ಕಳಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಬಾದಾಮಿಯ ನಿಷ್ಟಾವಂತ ನಾಯಕ ಚಿಮ್ಮನಕಟ್ಟಿ ಅವರನ್ನು ಮನೆಯಿಂದಲೇ ಆಚೆ ಕಳಿಸುವ ಕೆಲಸ ನಡೆಸಿದ್ದಾರೆ. ಸ್ವತಃ ಚಿಮ್ಮನಕಟ್ಟಿಯವರೇ ಸಿದ್ದರಾಮಯ್ಯ ಇನ್ಮುಂದೆ ಇಲ್ಲಿ ಸ್ಪರ್ಧಿಸಬಾರದು ಎಂದು ಹೇಳಿದ್ದಾರೆ. ಜಿಲ್ಲೆಗೆ ನ್ಯಾಯ ಕೊಡಬೇಕಿರುವ ವ್ಯಕ್ತಿಯೇ, ಈ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ. ಚಾಮುಂಡಿ ಕ್ಷೇತ್ರದಲ್ಲಿ ಸೋತು ಬೇರೆ, ಬೇರೆ ಕಾರಣಗಳಿಂದ ಇಲ್ಲಿ ಗೆದ್ದರು. ಕೈಗೆ ಸಿಗದ ವ್ಯಕ್ತಿಯಾಗಿ ಸುಮ್ಮನೆ ಮಾತನಾಡಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನ ಮುಗಿಸಲು ಹೊರಟಿದ್ದಾರೆ ಎಂದು ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ಜ್ವರ, ಕೆಮ್ಮು, ತಲೆನೋವು ಇದ್ದರೂ ಕೋವಿಡ್ ಟೆಸ್ಟ್ ಮಾಡಿಸಿ: ಕೇಂದ್ರ ಸೂಚನೆ

ಮೇಕೆದಾಟು ವಿಚಾರವಾಗಿ ಡಿ.ಕೆ. ಶಿವಕುಮಾರ್ ಅವರು ಪಾದಯಾತ್ರೆ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಪಾದಯಾತ್ರೆ ಮಾಡಬೇಕು ಅಂತ ಪಾಪ ಎಲ್ಲೋ ಶೂಟಿಂಗ್ ಮಾಡುತ್ತಿದ್ದಾರಂತೆ. ಫೇಸ್‍ಬುಕ್ ವಾಟ್ಸಾಪ್ ನಲ್ಲಿ ಟ್ರೋಲ್ ಮಾಡಿಕೊಂಡು ಲಾಭ ಪಡಿಬೇಕು ಅಂತ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಕೆಲಸ ಇಲ್ಲದ ಟೈಮ್‍ನಲ್ಲಿ 2023ಕ್ಕೆ ಅಧಿಕಾರಕ್ಕೆ ಬರಬೇಕು ಅಂತ ಹಗಲು ಕನಸು ಕಾಣುತ್ತಿದ್ದಾರೆ. ಒಂದು ಕಡೆ ಶೂಟಿಂಗ್ ಮಾಡುವವರು ಶೂಟಿಂಗ್ ಮಾಡುತ್ತಿದ್ದರೆ, ಇನ್ನೊಬ್ಬರು ಮುಖ್ಯಮಂತ್ರಿ ಆಗುತ್ತೇನೆ ಅಂತ ಯೋಜನೆಗಳ ಮೇಲೆ ಯೋಜನೆ ಘೋಷಣೆ ಮಾಡುತ್ತಿದ್ದಾರೆ. ಅವರು ಭ್ರಮೆಯಲ್ಲಿದ್ದಾರೆ. ಏನೇ ನಾಟಕ ಮಾಡಿದರೂ ಕೂಡ ಎಲ್ಲ ವ್ಯರ್ಥವಾಗುತ್ತದೆ. ಪ್ರದೇಶ್ ಕಾಂಗ್ರೆಸ್ ಪಕ್ಷ ಅಲ್ಲ. ಈಗ ಪರದೇಸಿ ಕಾಂಗ್ರೆಸ್ ಆಗಿದೆ. ಪರದೇಸಿ ಕಾಂಗ್ರೆಸ್ ಪಕ್ಷಕ್ಕೆ ನಾಯಕ ಯಾರು. ಒಂದು ಕಡೆ ದುಡ್ಡು ಇರುವ ಡಿಕೆಶಿ, ಆತ ಕೇವಲ ಪೋಸ್ ಕೊಟ್ಟು, ಅಲ್ಲೆಲ್ಲೋ ರೈತರ ಜೊತೆ ಫೋಟೋ ತಗಿಸಿ, ಅಲ್ಲಿಂದ ಪಬ್ಲಿಸಿಟಿ ಪಡೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಮೇಶ್ ಜಾರಕಿಹೊಳಿಗೆ ಸಂಪುಟದಲ್ಲಿ ಮತ್ತೆ ಸ್ಥಾನಮಾನ ಪಡೆಯಲಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನು ಹೇಳುವುದಕ್ಕಾಗಲ್ಲ. ಅವರು ಕೂಡ ಮಂತ್ರಿಗಳಾಗಿ ಕೆಲಸ ಮಾಡಿದಂತವರು, ಈಗ ಮಾಜಿ ಸಚಿವರಾಗಿದ್ದಾರೆ. ನಾನೀಗ ಪ್ರಸ್ತುತ ಮಿನಿಸ್ಟರ್ ಆಗಿದ್ದೇನೆ. ರಮೇಶ್ ಅವರು ಕೂಡ ನಮ್ಮ ನಾಯಕರೇ. ಹಾಗಾಗಿ ಅವರನ್ನು ನಂಬಿ ಬಂದವರಿಗೆ ಪಾರ್ಟಿಯಲ್ಲಿ ಸ್ಥಾನಮಾನ ನೀಡಲಾಗಿದೆ. ಏನಾದರೂ ಸಣ್ಣಪುಟ್ಟ ಸಮಸ್ಯೆ ಇದ್ದರೆ ಪಾರ್ಟಿ ಬಗೆ ಹರಿಸುವ ಕೆಲಸ ಮಾಡುತ್ತದೆ. ಹೀಗಾಗಿ ಪಾರ್ಟಿ ಬಿಟ್ಟು ಹೊರಗಡೆ ಹೋಗುವಂತವರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಜೆಡಿಎಸ್‌ಗೆ ಶಾಕ್ – ಪಕ್ಷ ತೊರೆಯಲಿದ್ದಾರೆ ಕಾಂತರಾಜು

ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ನಮ್ಮ ನಾಯಕರು ತಮ್ಮ ಹುಬ್ಬಳ್ಳಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಸೋ ಕಾಲ್ಡ್ ಬುದ್ದಿವಂತರು ಬಹಳ ಜನ ಇರುತ್ತಾರೆ. ಅವರು ನಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ನೋಡುತ್ತಿದ್ದಾರೆ. ನಮ್ಮ ಸ್ಪೀಡ್ ಕಟ್ ಅಪ್ ಮಾಡಬೇಕಂತ ಮಾಡುತ್ತಿದ್ದಾರೆ. ಈಶ್ವರಪ್ಪ ಹಾಗೂ ಯತ್ನಾಳ್ ಅವರದ್ದು ಅವರ ವೈಯಕ್ತಿಕ ವಿಚಾರ. ಅದೇನು ಪಾರ್ಟಿ ನಿರ್ಧಾರ ಅಲ್ಲ. ನಮ್ಮಲ್ಲಿ ಪಾರ್ಟಿ ಏನು ಹೇಳುತ್ತದೆ ಅದೇ ಫೈನಲ್ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *