ಬೌದ್ಧ ಧರ್ಮದ ವಿಧಿ-ವಿಧಾನದಂತೆ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ

Public TV
1 Min Read

ಮೈಸೂರು: ಅನಾರೋಗ್ಯದಿಂದ ಮೃತಪಟ್ಟ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (Srinivasa Prasad) ಅವರ ಅಂತ್ಯಕ್ರಿಯೆ ಅಶೋಕಪುರಂನ ಡಾ.ಬಿ.ಆರ್ ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಬೌದ್ಧ ಧರ್ಮದ ವಿದಿ-ವಿಧಾನದಂತೆ ನೆರವೇರಿತು.

ಅಂತ್ಯಕ್ರಿಯೆ (Srinivasa Prasad Funeral) ವೇಳೆ ಬೆಂಗಳೂರಿನ ಮಹಾಬೋಧಿಯ ಆನಂದ ಬಂತೇಜಿ, ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಕಲ್ಯಾಣಸಿರಿ ಬಂತೇಜಿ ನೇತೃತ್ವದಲ್ಲಿ ವಿಧಿ-ವಿಧಾನಗಳು ನೆರವೇರಿತು. ಈ ವೇಳೆ ಸುಮಾರು 15ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಬೌದ್ಧ ಬಂತೇಜಿಗಳಿಗೆ ವಸ್ತ್ರದಾನ, ಹಣ್ಣುಗಳ ಅರ್ಪಣೆ, ಪುಣ್ಯಾನುಮೋದನೆ ಬಳಿಕ ಕುಟುಂಬಸ್ಥರು ಗೌರವ ಸಲ್ಲಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ಮರೆಯಾದ ನಿಷ್ಕಳಂಕ ರಾಜಕಾರಣಿ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ಶ್ರೀನಿವಾಸ್ ಪ್ರಸಾದ್ ಅಂತಿಮ ದರ್ಶನ

ಅಂತ್ಯಕ್ರಿಯೆಗೂ ಮುನ್ನ ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಮೃತರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಈ ವೇಳೆ ಸಾವಿರಾರು ಜನ ಸೇರಿದ್ದು, ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು. ಅಂತ್ಯಕ್ರಿಯೆಗೂ ಮುನ್ನ ಸಚಿವ ಮಹದೇವಪ್ಪ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೈಸೂರು – ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ವಡೆಯರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.

ಮೈಸೂರಿನ ಅಶೋಕಪುರಂನ ಶ್ರೀನಿವಾಸ ಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ನಂಜನಗೂಡು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಮ್ಮೆ ಸಚಿವರಾಗಿ ಕೆಲಸ ಮಾಡಿ ಕಳೆದ ತಿಂಗಳು ರಾಜಕೀಯ ನಿವೃತ್ತಿ ಪಡೆದು ವಿಶ್ರಾಂತಿ ಜೀವನ ಆರಂಭಿಸಿದ್ದರು. ಶ್ರೀನಿವಾಸ್ ಪ್ರಸಾದ್ ಅವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ್‌ ಪ್ರಸಾದ್‌ ವಿಧಿವಶ – ಪ್ರಭಾವಿ ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ ಹೇಗಿತ್ತು?

Share This Article