ಉಡುಪಿ: ಆಸ್ಟ್ರೇಲಿಯಾದ ಸಿಡ್ನಿ ಶ್ರೀ ಪುತ್ತಿಗೆಮಠದಲ್ಲಿ ಶ್ರೀನಿವಾಸಕಲ್ಯಾಣ ಮಹೋತ್ಸವ ನಡೆಯಿತು. ಸಿಡ್ನಿ ಮಹಾನಗರದ ಶ್ರೀಪುತ್ತಿಗೆಮಠದ ಶ್ರೀವೆಂಕಟಕೃಷ್ಣ ವೃಂದಾವನದಲ್ಲಿ ಇದೇ ಪ್ರಥಮವಾಗಿ ವೈಭವದ ಶ್ರೀನಿವಾಸಕಲ್ಯಾಣ ಮಹೋತ್ಸವವು ಆಯೋಜನೆಯಾಗಿತ್ತು.
ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರ ಭಕ್ತರ ಪಾಲ್ಗೊಂಡಿದ್ದರು. ಸಿಡ್ನಿ ಮಹಾನಗರದ ಮೇಯರ್ ಹಾಗೂ ಸಂಸದರು, ಅನೇಕ ಗಣ್ಯರು ಪಾಲ್ಗೊಂಡಿದ್ದರು. ಅನಿವಾಸಿ ಭಾರತೀಯರ ಜೊತೆ ಆಸ್ಟ್ರೇಲಿಯಾದ ಜನರಿಗೆ ದೇವರ ಮದುವೆಯನ್ನು ನೋಡುವ ಅವಕಾಶ ಕಲ್ಪಿಸುವ ಇಚ್ಛೆ ಇತ್ತು. ಭಾರತದಲ್ಲಿ ಮದುವೆಗೆ ಪವಿತ್ರ ಸ್ಥಾನವಿದೆ. ದೇವರ ಕಲ್ಯಾಣ ಅದೊಂದು ಉತ್ಸವದ ರೀತಿಯಲ್ಲಿ ನಡೆದಿರಬಹುದು ಎಂಬುದು ನಮ್ಮ ಕಲ್ಪನೆ. ಅದರಂತೆ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದೆ ಎಂದು ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.
ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಭಜನೆ, ನೃತ್ಯ ಸಂಗೀತ ಮತ್ತು ವಿದ್ವಾನ್ ಕೇಶವ ತಾಡಪತ್ರಿಯವರಿಂದ ಪ್ರವಚನ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕರ್ನಾಟಕದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳುವ ಜನಕ್ಕಿಂತ ಹೆಚ್ಚು ಸಭೆ ಆಸ್ಟ್ರೇಲಿಯಾದಲ್ಲಿ ಪಾಲ್ಗೊಂಡಿದ್ದು ವಿಶೇಷ.