ಮೂವರು ಡಿಸಿಎಂಗಳಿಂದ ಉಪಯೋಗ ಏನಿದೆ- ಶ್ರೀನಿವಾಸ್ ಪ್ರಸಾದ್ ಪ್ರಶ್ನೆ

Public TV
1 Min Read

ಮೈಸೂರು: ಕೊನೆಗೂ ರಾಜ್ಯ ಸರ್ಕಾರ ಖಾತೆ ಹಂಚಿಕೆ ಮಾಡಿದ್ದು, ಈ ಬೆನ್ನಲ್ಲೇ ಪಕ್ಷದ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇಷ್ಟು ಮಾತ್ರವಲ್ಲದೇ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವುದು ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ಮೂವರು ಡಿಸಿಎಂಗಳನ್ನು ಮಾಡಿರುವುದರಿಂದ ಉಪಯೋಗ ಏನಿದೆ ಎಂದು ಪಕ್ಷದ ಆಯ್ಕೆಯ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇವತ್ತಿನ ಪರಿಸ್ಥಿತಿಯಲ್ಲಿ ಮೂವರು ಡಿಸಿಎಂ ಅವಶ್ಯಕತೆ ಇಲ್ಲ. ಹೈಕಮಾಂಡ್ ಮಾಡಿದರೆ ಅದು ಹೈಕಮಾಂಡ್ ತಪ್ಪು. ಜನರು ಎಲ್ಲವನ್ನೂ ನೋಡುತ್ತಾ ಇದ್ದಾರೆ. ಹೈಕಮಾಂಡ್‍ಗೆ ಸರಿಯಾದ ಮಾಹಿತಿ ನೀಡಬೇಕಿತ್ತು. ಹೈಕಮಾಂಡ್ ತೆಗೆದುಕೊಂಡಿರೋ ನಿರ್ಧಾರ ಸರಿಯಲ್ಲ. ಪಕ್ಷವನ್ನು ಇನ್ನೂ ಚೆನ್ನಾಗಿ ನಡೆಸಬಹುದಿತ್ತು ಎಂದು ಹೇಳಿದ್ದಾರೆ.

ಮೊದಲು ಹೊಂದಾಣಿಕೆ ಮಾಡಿಕೊಂಡು ಹೋಗಿ. ರಾಜ್ಯದ ಮುಖಂಡರು ತೀರ್ಮಾನ ಮಾಡಿಕೊಂಡು ನಿರ್ಧಾರ ಮಾಡಿ. ಈ ರೀತಿ ಕಚ್ಚಾಟದಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಹೀಗಾಗಿ ಡಿಸಿಎಂ ಸ್ಥಾನ, ಖಾತೆಗಾಗಿ ಜಗಳ ಬಿಡಿ. ಅತೃಪ್ತ ಶಾಸಕರ ಭವಿಷ್ಯದ ಬಗ್ಗೆ ನಿಮಗೆ ಗಮನ ಬೇಡ್ವಾ ಎಂದು ಪ್ರಶ್ನಿಸಿದ ಸಂಸದರು, ಅತೃಪ್ತರ ರಾಜೀನಾಮೆಯಿಂದ ನಿಮಗೆ ಅಧಿಕಾರ ಸಿಕ್ಕಿದೆ. ಇದನ್ನು ನೆನಪಿಟ್ಟುಕೊಂಡು ಒಳ್ಳೆಯ ಸರಕಾರ ಕೊಡಿ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯನು ಕೂಡ ಅತೃಪ್ತ ಶಾಸಕನೇ. ಸಿಎಂಗೆ ಕೆಲಸ ಮಾಡಿಕೊಡಿ ಎಂದು 20 ಪತ್ರ ಬರೆದಿದ್ದರು. ಆದರೆ ಅದರಲ್ಲಿ ಒಂದು ಕೆಲಸವೂ ಮಾಡಿಕೊಡಲಿಲ್ಲ. ಇದನ್ನ ಸ್ವತಃ ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಕೂಡ ಅತೃಪ್ತ ಶಾಸಕರಾಗುತ್ತಾರೆ ಎಂದು ಸಂಸದರು ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *