ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

Public TV
2 Min Read

– ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ

ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳು (Sri Raghavendra Swamy) ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷಗಳು ಸಂದಿವೆ. ಈ ಹಿನ್ನೆಲೆ ಮಂತ್ರಾಲಯ ರಾಯರ ಮಠದಲ್ಲಿ ಗುರುರಾಯರ ಆರಾಧನಾ ಮಹೋತ್ಸವದ ಮುಖ್ಯ ಘಟ್ಟ ಮಧ್ಯಾರಾಧನೆಯನ್ನ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ಗುರು ರಾಯರ ಆರಾಧನಾ ಮಹೋತ್ಸವದ ಬಹು ಮುಖ್ಯವಾದ ದಿನ ಮಧ್ಯಾರಾಧನೆ ಇಂದು ಮಂತ್ರಾಲಯ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ನಡೆಯುತ್ತಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾದ ಶ್ರಾವಣ ಶುಕ್ಲ ಪಕ್ಷದ ಬಿದಿಗೆಯ ಮಂಗಳಕರವಾದ ಈ ದಿನವನ್ನ ಮಧ್ಯಾರಾಧನೆ (Madhyaradhane) ಎಂದು ಆಚರಿಸಲಾಗುತ್ತದೆ. ಈ ದಿನ ಭಕ್ತರಿಗೆ ವಿಶೇಷ ಅನುಗ್ರಹ ದೊರೆಯುತ್ತದೆ ಅನ್ನೋ ಪ್ರತೀತಿಯಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಪೂರ್ವಾರಾಧನೆ ಸಂಭ್ರಮ – ಸಂಜೆ ಗುರು ಅನುಗ್ರಹ ಪ್ರಶಸ್ತಿ ಪ್ರದಾನ

ಈ ದಿನ ವಿಶೇಷವಾಗಿ ಮಠದ ಪೀಠಾಧಿಪತಿಗಳು ರಾಯರ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನ ಮಾಡುತ್ತಾರೆ. ಪ್ರತಿನಿತ್ಯದ ಪಂಚಾಮೃತ ಅಭಿಷೇಕಕ್ಕಿಂತ ಹತ್ತುಪಟ್ಟು ಹೆಚ್ಚು ಪದಾರ್ಥಗಳನ್ನ ಬಳಸಲಾಗುತ್ತದೆ. ಮಧ್ಯಾರಾಧನೆ ಅಂಗವಾಗಿ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಜರುಗುತ್ತದೆ. ನೂತನವಾಗಿ ನಿರ್ಮಾಣವಾದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ವೇಳೆ ತೆಪ್ಪೋತ್ಸವ ಜರುಗಲಿದೆ. ದೇಶದ ವಿವಿಧೆಡೆಯಿಂದ ಭಕ್ತರು, ಗಣ್ಯರು ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆಯುತ್ತಾರೆ.

ಮಂತ್ರಾಲಯಕ್ಕೆ ಬರುವ ಭಕ್ತರು ಪವಿತ್ರ ತುಂಗಭದ್ರಾ ನದಿ ಸ್ನಾನ ಮಾಡಲು ಹಾತೊರೆಯುತ್ತಾರೆ. ಆದರೆ, ಈ ಭಾರಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರಕ್ಕೆ ತೆರಳದಂತೆ ಭಕ್ತರಿಗೆ ಮುನ್ಸೂಚನೆ ನೀಡಿ, ಕಟ್ಟೆಚ್ಚರ ವಹಿಸಲಾಗಿದೆ. ನದಿ ಪಾತ್ರದಲ್ಲಿ ರಾಯರ ಭಕ್ತರಿಗೆ ಪುಣ್ಯ ಸ್ನಾನಕ್ಕಾಗಿ ಶವರ್‌ಗಳ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಮೂಲ ವೃಂದಾವನಕ್ಕೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

ರಾಯರ ಆರಾಧನಾ ಮಹೋತ್ಸವಕ್ಕೆ ದೇಶದ ಮೂಲೆ
ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ. ಇಂದಿನ ಮಧ್ಯಾರಾಧನೆ ಬಳಿಕ ಆ.12 ರಂದು ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಉತ್ತರಾರಾಧನೆಯೊಂದಿಗೆ ರಾಯರ ಆರಾಧನಾ ಮಹೋತ್ಸವದ ಮುಖ್ಯ ಮೂರು ದಿನಗಳ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

Share This Article