ಯತೀಶ್ ವೆಂಕಟೇಶ್ ಹಾಗೂ ಗಣೇಶ್ ಪಾಪಣ್ಣ ಸೇರಿ ನಿರ್ಮಿಸುತ್ತಿರುವ, ಡಾ.ಸೂರಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಾಲಯ (Mahalaya) ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೋಹನ್ ಮಾಯಣ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ದೃಶ್ಯಕ್ಕೆ ರೋರಿಂಗ್ ಸ್ಟಾರ್ ಶ್ರೀಮುರುಳಿ (Sri Murali) ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿ, ಚಿತ್ರಕ್ಕೆ ಶುಭ ಕೋರಿದರು.
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಗಣೇಶ್ ಪಾಪಣ್ಣ, ಇದು ನಮ್ಮ ಪರ್ಪಲ್ ರಾಕ್ ಸಂಸ್ಥೆಯ ಐದನೇ ಚಿತ್ರ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಅರ್ಥವಾಗುವಂಥ ವಿಭಿನ್ನ ಕಂಟೆಂಟ್ ಈ ಚಿತ್ರದಲ್ಲಿದೆ. ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ. ರಷ್ಯಾದ ಅರ್ಮೇನಿಯಾದಲ್ಲಿ 7-10 ದಿನಗಳ ದಿನಗಳ ಕಾಲ ಚಿತ್ರೀಕರಣ, ನಂತರ ಬೆಂಗಳೂರು, ಆನಂತರ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸೇರಿ 40 ರಿಂದ 50 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದೇವೆ. ಈ ಚಿತ್ರಕ್ಕೆ ಕಥೆಯೇ ನಾಯಕ. ಆದರೆ, 20 ಕ್ಕೂ ಹೆಚ್ಚು ಪ್ರಮುಖಪಾತ್ರಗಳಿದ್ದು, ಆ ಪಾತ್ರಗಳಲ್ಲಿ ಜನಪ್ರಿಯ ಕಲಾವಿದರು ಅಭಿನಯಿಸಲಿದ್ದಾರೆ. ಆಡಿಷನ್ ಮೂಲಕವೂ ಕಲಾವಿದರ ಆಯ್ಕೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುತ್ತೇವೆ. ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಂಟೆಂಟ್ ಚಿತ್ರದಲ್ಲಿದ್ದು, ಪ್ರತಿಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆಯಿದೆ. ಡಾ.ಸೂರಿ ಅವರು ಕ್ರಿಯೇಟಿವ್ ಹೆಡ್ ಆಗಿ ನಮ್ಮ ಜತೆ ನಿಂತಿದ್ದಾರೆ ಎಂದು ಹೇಳಿದರು.
ಮತ್ತೊಬ್ಬ ನಿರ್ಮಾಪಕ ಯತೀಶ್ ವೆಂಕಟೇಶ್ ಮಾತನಾಡಿ, ಮೊದಲ ಬಾರಿಗೆ ನಮ್ಮ ಚಿತ್ರಕ್ಕಾಗಿ ಅರ್ಮಾನಿಯಾದಿಂದ ಕಲಾವಿದರನ್ನು ಕರೆತರುತ್ತಿದ್ದೇವೆ. ಮೂರು ಭಾಗಗಳಲ್ಲಿ ಸಿನಿಮಾ ಕಥೆ ಸಾಗುತ್ತದೆ. ಅದರ ಒಂದು ಭಾಗದಲ್ಲಿ ಈ ಕಲಾವಿದರು ಇರುತ್ತಾರೆ. ನಿರ್ದೇಶಕ ಮೋಹನ್ ಮಾಯಣ್ಣ ಅವರ ಹತ್ತಿರ 3-4 ಕಥೆಗಳನ್ನು ಕೇಳಿದ್ದೇನೆ. ಎಲ್ಲವೂ ನಮ್ಮ ಮಣ್ಣಿನ ಕಥೆಗಳೇ ಆಗಿದ್ದವು. ನಮ್ಮ ಟ್ರೆಡಿಷನ್ ಬಗ್ಗೆ ಅವರು ಹೇಳುವ ಶೈಲಿ ನನಗಿಷ್ಟವಾಯಿತು. ಹಾಗಾಗಿ, ಅವರ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ಕೊಟ್ಟಿದ್ದೇವೆ ಎಂದು ಹೇಳಿದರು.
ನಾನು ಎ.ಹರ್ಷ ಅವರ ಜತೆಗೆ ಸೀತಾರಾಮ ಕಲ್ಯಾಣ, ಭಜರಂಗಿ-2 ಚಿತ್ರಗಳಲ್ಲಿ ಕೆಲಸ ಮಾಡಿದ್ದೆ. ಅಲ್ಲದೇ ನಾಲ್ಕೈದು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಅದನ್ನು ನೋಡಿ ನಿರ್ಮಾಪಕರು ಇಂಥ ದೊಡ್ಡ ಅವಕಾಶ ನೀಡಿದ್ದಾರೆ. 1990ರ ಸಮಯದಲ್ಲಿ ನಡೆಯುವ ಕಥೆಯಿದಾಗಿದ್ದು, ಚಿತ್ರದಲ್ಲಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥ ಕಂಟೆಂಟ್ ಇದೆ ಎಂದು ನಿರ್ದೇಶಕ ಮೋಹನ್ ಮಾಯಣ್ಣ ಹೇಳಿದರು. ಪವನ್ ಸಾಯಿಕುಮಾರ್ ಛಾಯಾಗ್ರಹಣ, ಭುವನ್ ಚಂದ್ ಸಂಗೀತ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಹಾಗೂ ಅದ್ದೂರಿ ಗಿರೀಶ್ ಅವರ ನಿರ್ಮಾಣ ನಿರ್ವಹಣೆ ‘ಮಹಾಲಯ’ ಚಿತ್ರಕ್ಕಿದೆ.