ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು – ಪ್ರಧಾನಿ ಹೊರತುಪಡಿಸಿ, ಎಲ್ಲಾ ಸಚಿವರು ರಾಜೀನಾಮೆ

Public TV
2 Min Read

ಕೊಲಂಬೊ: ಆರ್ಥಿಕ ಬಿಕ್ಕಿನಲ್ಲಿ ಸಿಲುಕಿರುವ ಶ್ರೀಲಂಕಾ ರಾಜಕೀಯದಲ್ಲಿ ಪ್ರಮುಖ ಬೆಳವಣೆಗೆಯೊಂದು ನಡೆದಿದ್ದು, ಭಾನುವಾರ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸಂಸತ್ತಿನ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ದೇಶದ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾನುವಾರ ಮಹಿಂದಾ ರಾಜಪಕ್ಸೆ ಅವರು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಯಿಂದಾಗಿ ಮಹಿಂದಾ ರಾಜಪಕ್ಸೆ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೆಪೋಹಗಳನ್ನು ಇದೀಗ ಹರಿದಾಡುತ್ತಿದೆ. ಅಲ್ಲದೇ ಈ ಸಭೆಯಲ್ಲಿ ಹಲವಾರು ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಶ್ರೀಲಂಕಾದ ಶಿಕ್ಷಣ ಸಚಿವ ದಿನೇಶ್ ಗುಣವರ್ದನಾ ಅವರು, ಭಾನುವಾರ ತಡರಾತ್ರಿ ನಡೆದ ಸಭೆಯಲ್ಲಿ ಅಧ್ಯಕ್ಷ ಗೋಟಾಬಯ ಮತ್ತು ಮಹಿಂದಾ ರಾಜಪಕ್ಸೆ ಅವರನ್ನು ಹೊರತುಪಡಿಸಿ ಸಂಸ ತ್ತಿನ ಎಲ್ಲಾ ಸಚಿವರು ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

ಮತ್ತೊಂದೆಡೆ ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಮಲ್ ರಾಜಪಕ್ಸೆ ಅವರು, ಎಲ್ಲ ಖಾತೆಗಳಿಗೆ ನನ್ನ ರಾಜೀನಾಮೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾದ ಮಾಜಿ ಸಚಿವ ವಿಮಲ್ ವೀರವಾಂಸ ಅವರು ಅಧ್ಯಕ್ಷರನ್ನು ಭೇಟಿ ಮಾಡಿ, ದೇಶದಲ್ಲಿ ಪ್ರಸ್ತುತ ಬಿಕ್ಕಟ್ಟನ್ನು ಸುಧಾರಿಸಲು ಸರ್ವಪಕ್ಷಗಳೊಂದಿಗೆ ಮಧ್ಯಂತರ ಸರ್ಕಾರವನ್ನು ನೇಮಿಸುವುದರ ಬಗ್ಗೆ ಪ್ರಸ್ತಾಪಿಸಿದರು.  ಇದನ್ನೂ ಓದಿ: ಒಂದು ಮೊಟ್ಟೆಗೆ 30 ರೂಪಾಯಿ- ಶ್ರೀಲಂಕಾದಲ್ಲಿ ದಿನಸಿ ಬೆಲೆ ಏರಿಕೆ

ಹಣದುಬ್ಬರದಿಂದಾಗಿ ಶ್ರೀಲಂಕಾದಲ್ಲಿ ಸರಕುಗಳ ಬೆಲೆಗಳನ್ನು ಗಗನಕ್ಕೇರಿದೆ. ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಶ್ರೀಲಂಕಾದಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ.

ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜಧಾನಿ ಸೇರಿದಂತೆ ದೇಶದ ಅನೇಕ ಪ್ರದೇಶಗಳಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದು, ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತಕ್ಕೆ ಮಹಿಂದಾ ರಾಜಪಕ್ಸೆ ಆಡಳಿತವನ್ನು ನಾಗರಿಕರು ದೂಷಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *