ನಮ್ಮ ಭೂಮಿಯನ್ನು ಭಾರತದ ಭದ್ರತಾ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲು ಬಿಡಲ್ಲ: ಶ್ರೀಲಂಕಾ ಭರವಸೆ

Public TV
2 Min Read

– ಭಾರತ – ಶ್ರೀಲಂಕಾ ಮೊದಲ ರಕ್ಷಣಾ ಒಪ್ಪಂದಕ್ಕೆ ಸಹಿ

ಕೊಲಂಬೊ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ (Anura Kumara Dissanayake) ಅವರನ್ನ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ರಕ್ಷಣಾ ಒಪ್ಪಂದ ಸೇರಿದಂತೆ ಸುಮಾರು 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಚರ್ಚೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ, ಭಾರತದ ಭದ್ರತೆಗೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಅಡ್ಡಿಯುಂಟು ಮಾಡುವ ಯಾವುದೇ ಚಟುವಟಿಕೆ ನಡೆಸಲು ನಮ್ಮ ಭೂಮಿಯನ್ನು ಬಳಸುವುದಕ್ಕೆ ಬಿಡಲ್ಲ ಎಂದು ಭರವಸೆ ನೀಡಿದ್ದಾರೆ.

ಶ್ರೀಲಂಕಾದ ವಿಶೇಷ ಆರ್ಥಿಕ ವಲಯವನ್ನು ಮೀರಿ ವರ್ತಿಸುವುದಕ್ಕೆ ಯಾವುದೇ ಕಾರಣಕ್ಕೂ ಲಂಕಾ ಸರ್ಕಾರ ಅವಕಾಶ ನೀಡುವುದಿಲ್ಲ. ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆರ್ಥಿಕ ವಲಯಗಳ ಬಳಕೆಗೆ ಇತಿಮಿತಿ ಹೇರುವ ಅವಶ್ಯಕತೆ ಇದೆ. ಈ ಬಗ್ಗೆ ಗಮನಹರಿಸಬೇಕಾಗಿದೆ. ವಿಶ್ವಸಂಸ್ಥೆಯ ಆಯೋಗಕ್ಕೆ ಶ್ರೀಲಂಕಾ ಇತ್ತೀಚೆಗೆ ಸಲ್ಲಿಸಿದ ಮನವಿಯಲ್ಲೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ಬೇಕು ಎಂದು ಅವರು ಹೇಳಿದ್ದಾರೆ.

ರಕ್ಷಣಾ ಒಪ್ಪಂದಕ್ಕೆ ಸಹಿ:
ಪ್ರಧಾನಿ ನರೇಂದ್ರ ಮೋದಿ ಅವರ ಈ ಲಂಕಾ ಭೇಟಿಯಲ್ಲಿ ಭಾರತ ಮತ್ತು ಶ್ರೀಲಂಕಾ ಮೊದಲ ಬಾರಿಗೆ ಮಹತ್ವಾಕಾಂಕ್ಷೆಯ ರಕ್ಷಣಾ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಿವೆ. ಇದು ವಿಸ್ತೃತ ದ್ವಿಪಕ್ಷೀಯ ಸಹಕಾರದ ಮಾರ್ಗಸೂಚಿಯಾಗಿ ಕೆಲಸ ಮಾಡಲಿದೆ. ಎರಡೂ ರಾಷ್ಟ್ರಗಳ ಸುರಕ್ಷತೆಯು ಪರಸ್ಪರ ಸಂಬಂಧ ಹೊಂದಿದೆ ಎಂದು ರಕ್ಷಣಾ ಪರಿಣಿತರು ಹೇಳಿದ್ದಾರೆ.

ಇದೇ ವೇಳೆ ಚೀನಾದ ಬೆಲ್ಡ್‌ ಅಂಡ್‌ ರೊಡ್‌ ಜಾಗತಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲುದಾರರಾಗುವಂತೆ ಚೀನಾ ದೇಶವು ಶ್ರೀಲಂಕಾದ ಮೇಲೆ ಸಹಕಾರದ ನೆಪದಲ್ಲಿ ಒತ್ತಡ ಹೇರುತ್ತಲೇ ಬಂದಿದೆ. 2022ರಲ್ಲಿ ಲಂಕಾದ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದಾಗ ಭಾರತಕ್ಕೆ ಹೊಸ ಅವಕಾಶ ಸಿಕ್ಕಿತು. ನವದೆಹಲಿ ಶ್ರೀಲಂಕಾಕ್ಕೆ ಹಣಕಾಸಿನ ನೆರವು, ಆಹಾರ, ಇಂಧ, ಔಷಧ ಸೇರಿ ಎಲ್ಲ ರೀತಿಯ ನೆರವನ್ನು ಪೂರೈಸಿತು. ಅಲ್ಲಿಂದ ಚಿತ್ರಣ ಬದಲಾಯಿತು ಎಂಬುದನ್ನು ತಜ್ಞರು ನೆನಪಿಸಿಕೊಂಡಿದ್ದಾರೆ.

Share This Article