ರಾಯಚೂರು: ಮಂತ್ರಾಲಯ (Mantralya) ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ (Krishna Janmashtami) ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಕೃಷ್ಣನ ಪೂಜೆಗೂ ಮುನ್ನ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಶ್ರೀಗಳ (Subudhendra Teertha Swamiji) ನೇತೃತ್ವದಲ್ಲಿ ಪಿಂಡ್ಲಿ ಉತ್ಸವ ಅದ್ಧೂರಿಯಾಗಿ ನೆರವೇರಿತು. ಮಠದ ಹೊರಗೆ ರಾಜ ಬೀದಿಯಲ್ಲಿ ಪಿಂಡ್ಲಿ ಉತ್ಸವ ಆಯೋಜಿಸಲಾಗಿತ್ತು.
ಸ್ವತಃ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಪಿಂಡ್ಲಿ ಉತ್ಸವದಲ್ಲಿ ಪಾಲ್ಗೊಂಡು ಮೊಸರು, ಹಾಲು, ಬೆಣ್ಣೆ ತುಂಬಿದ ಮಡಿಕೆಯನ್ನ ಒಡೆದರು. ಉತ್ಸವದಲ್ಲಿ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಮಠದ ಸಿಬ್ಬಂದಿ, ಭಕ್ತರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ನಿರಂತರ ಎರಚುವ ಓಕಳಿ ಮಧ್ಯೆಯೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗಡಿಗಿ ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಬಳಿಕ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಯಿತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳದ ಆರೋಪ – ಮಗುವಿನ ಎದುರೇ ತಾಯಿ ನೇಣಿಗೆ ಶರಣು
ಇನ್ನೂ ರಾಯಚೂರು ಜಿಲ್ಲೆಯ ಎಲ್ಲೆಡೆ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿತ್ತು. ನಗರದ ಗೀತಾ ಮಂದಿರ, ಶ್ರೀಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನ ನೆರವೇರಿಸಲಾಯಿತು. ಪುಟ್ಟಮಕ್ಕಳು ಕೃಷ್ಣ ರಾಧ ವೇಷಧರಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಬಂಧನ ಬಳಿಕ ದರ್ಶನ್, ಪವಿತ್ರಾ ಗೌಡ ಮೊದಲ ಫೋಟೋ ವೈರಲ್