ಆಗಸ್ಟ್ 21 ರಿಂದ ರಾಯರ 350ನೇ ಆರಾಧನಾ ಮಹೋತ್ಸವ: ಸುಬುಧೇಂದ್ರ ತೀರ್ಥ ಸ್ವಾಮಿ

Public TV
1 Min Read

ರಾಯಚೂರು: ಗುರುರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವ ಆಗಸ್ಟ್ 21 ರಿಂದ 27ರವರೆಗೆ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಹೇಳಿದ್ದಾರೆ.

ಮಂತ್ರಾಲಯದಲ್ಲಿ ಮಾತನಾಡಿದ ಶ್ರೀಗಳು, ರಾಘವೇಂದ್ರ ಸ್ವಾಮಿಗಳು ಸಶರೀರವಾಗಿ ವೃಂದಾವನಸ್ಥರಾದ ದಿನದ ಹಿನ್ನೆಲೆ ಆರಾಧನಾ ಮಹೋತ್ಸವ ಆಚರಣೆ ಮಾಡಲಾಗುತ್ತದೆ. ಕೋವಿಡ್ ನಿಯಮಗಳನ್ನ ಪಾಲಿಸಿ ಆರಾಧನಾ ಮಹೋತ್ಸವ ನಡೆಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ದುಂದುವೆಚ್ಚ ಹಾಗೂ ವಿಜೃಂಭಣೆಯಿಂದ ಮಾಡದೇ ಸಾಂಸ್ಕೃತಿಕವಾಗಿ ಆಚರಿಸಲಾಗುತ್ತದೆ. ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ. ಈ ಬಾರಿಯೂ ದೇಶದ ವಿವಿಧೆಡೆಯಿಂದ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ಸ್ಯಾನಿಟೈಸೇಷನ್, ಎಲೆಕ್ಟ್ರಾನಿಕ್ ಥರ್ಮಲ್ ಸ್ಕ್ರೀನಿಂಗ್ ಹಾಗೂ ಆಧುನಿಕ ಯಂತ್ರಗಳ ಅಳವಡಿಕೆ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದ್ದು, ವೈದ್ಯರ ಸೇವೆಗೆ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ವಸತಿ, ಊಟ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ತಿರುಪತಿ ತಿರುಮಲ ದೇವಾಲಯದಿಂದ ಶೇಷ ವಸ್ತ್ರ ಬರಲಿದೆ. ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಹೊರ ಪ್ರಾಂಗಣದಲ್ಲಿ ಏಳುದಿನ ನಡೆಯಲಿವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬಕ್ಕೆ ಶಾಪಿಂಗ್ – ಕೊರೊನಾ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ ಜನ

ಭಕ್ತರ ಕಾಣಿಕೆಯಿಂದ 14 ಕೆ.ಜಿ. ಚಿನ್ನದ ಪೂಜಾ ಪಾತ್ರೆಗಳ ತಯಾರಿಕೆ ನಡೆದಿದೆ. ಭವ್ಯವಾದ ಮ್ಯೂಸಿಯಂ ಸಿದ್ದಗೊಳಿಸಿದ್ದು ಆರಾಧನಾ ಕಾರ್ಯಕ್ರಮ ವೇಳೆ ಲೋಕಾರ್ಪಣೆ ನಡೆಯಲಿದೆ. ಮಿನಿ ಏರ್ಪೋರ್ಟ್ ನಿರ್ಮಾಣಕ್ಕೆ ದಾನಿಗಳು ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಆಗಲಿದೆ. ರಾಯಚೂರಿನಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ರಾಯರ ಹೆಸರನ್ನು ಇಡುವುದು ಸೂಕ್ತ. ವಿಮಾನದಲ್ಲಿ ಬರುವ ಹೆಚ್ಚು ಪ್ರಯಾಣಿಕರು ರಾಯರ ಭಕ್ತರು ಆಗಿರುತ್ತಾರೆ. ಮಂತ್ರಾಲಯಕ್ಕೆ ಬರುವವರೇ ಹೆಚ್ಚು ಇರುತ್ತಾರೆ ಅಂತ ಸುಬುಧೇಂದ್ರತೀರ್ಥ ಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ:2 ದಿನ ಹಂಪಿ ವೀಕ್ಷಣೆ ಮಾಡಲಿದ್ದಾರೆ ವೆಂಕಯ್ಯ ನಾಯ್ಡು

Share This Article
Leave a Comment

Leave a Reply

Your email address will not be published. Required fields are marked *