ಸನ್‌ ರೈಸರ್ಸ್‌ ಆರ್ಭಟಕ್ಕೆ ಆರ್‌ಸಿಬಿ ಬರ್ನ್‌ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು

Public TV
3 Min Read

ಲಕ್ನೋ: ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್‌ಸಿಬಿ 3ನೇ ಸ್ಥಾನಕ್ಕೆ ಕುಸಿದಿದೆ. 12 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಗಳಿಸಿರುವ ಪಂಜಾಬ್‌ ಕಿಂಗ್ಸ್‌ 2ನೇ ಸ್ಥಾನಕ್ಕೆ ಜಿಗಿದಿದೆ.

ಗೆಲುವಿಗೆ 232 ರನ್‌ಗಳ ಬೃಹತ್‌ ಗುರಿ ಪಡೆದಿದ್ದ ಆರ್‌ಸಿಬಿ ಆರಂಭದಿಂದಲೇ ಕೌಂಟರ್‌ ಅಟ್ಯಾಕ್‌ ಮಾಡಲು ಶುರು ಮಾಡಿತ್ತು. ವಿರಾಟ್‌ ಕೊಹ್ಲಿ-ಫಿಲ್‌ ಸಾಲ್ಟ್‌ (Virat Kohli-Phil Salt) ಅವರ ಆರಂಭಿಕ ಜೊತೆಯಾಟದಿಂದ 43 ಎಸೆತಗಳಲ್ಲಿ 80 ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಈ ಬೆನ್ನಲ್ಲೇ ಮಯಾಂಕ್‌ ಅಗರ್ವಾಲ್‌ ಫಿಲ್‌ ಸಾಲ್ಟ್‌ ಜೋಡಿ 2ನೇ ವಿಕೆಟಿಗೆ 22 ಎಸೆತಗಳಲ್ಲಿ 40 ರನ್‌ ಕಲೆಹಾಕಿತ್ತು. 4ನೇ ವಿಕೆಟಿಗೆ ಜಿತೇಶ್‌ ಶರ್ಮಾ, ರಜತ್‌ ಪಾಟಿದಾರ್‌ ಜೋಡಿ 26 ಎಸೆತಗಳಲ್ಲಿ 44 ರನ್‌ ಕಲೆಹಾಕಿತ್ತು.

ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದ ಹೊರತಾಗಿಯೂ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಆರ್‌ಸಿಬಿ 14 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿತ್ತು. ಇದರಿಂದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದ್ರೆ 15-16ನೇ ಓವರ್‌ ದುಬಾರಿಯಾಯಿತು. 15ನೇ ಓವರ್‌ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ನಿತೀಶ್‌ ಕುಮಾರ್‌ ರೆಡ್ಡಿ ಕೇವಲ 4 ರನ್‌ ಬಿಟ್ಟುಕೊಟ್ಟರು. 16ನೇ ಓವರ್‌ನಲ್ಲಿ ಎಶಾನ್ ಮಾಲಿಂಗ 7 ರನ್‌ ಬಿಟ್ಟುಕೊಟ್ಟು 2 ಪ್ರಮುಖ ವಿಕೆಟ್‌ ಕಿತ್ತರು. ಮುಂದಿನ 17, 18ನೇ ಓವರ್‌ನಲ್ಲೂ ಆರ್‌ಸಿಬಿ ತಲಾ ಒಂದೊಂದು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಹೀಗಾಗಿ ಗೆಲುವಿನ ಓಟದಲ್ಲಿ ಮುನ್ನುಗ್ಗುತ್ತಿದ್ದ ಆರ್‌ಸಿಬಿ ಸೋಲಿನ ರುಚಿ ಕಂಡಿತು.

ಆರ್‌ಸಿಬಿ ಪರ ಫಿಲ್‌ ಸಾಲ್ಟ್‌ 62 ರನ್‌ (32 ಎಸೆತ, 5 ಸಿಕ್ಸರ್‌, 4 ಬೌಂಡರಿ), ವಿರಾಟ್‌ ಕೊಹ್ಲಿ 43 ರನ್‌ (25 ಎಸೆತ, 1 ಸಿಕ್ಸರ್‌, 7 ಬೌಂಡರಿ), ರಜತ್‌ ಪಾಟಿದಾರ್‌ 18 ರನ್‌, ಜಿತೇಶ್‌ ಶರ್ಮಾ 24 ರನ್‌, ಮಯಾಂಕ್‌ ಅಗರ್ವಾಲ್‌ 11 ರನ್‌, ಟಿಮ್‌ ಡೇವಿಡ್‌ 1 ರನ್‌, ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌ ತಲಾ 3 ರನ್‌, ಕೃನಾಲ್‌ ಪಾಂಡ್ಯ 8 ರನ್‌ ಗಳಿಸಿ ಔಟಾದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತ್ತು. ಮೊದಲ ಓವರ್‌ನಿಂದಲೇ ಸ್ಪೋಟಕ ಪ್ರದರ್ಶನ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೊದಲ ವಿಕೆಟ್‌ಗೆ 25 ಎಸೆತಗಳಲ್ಲಿ 54 ರನ್ ಜೊತೆಯಾಟ ನೀಡಿತ್ತು. ಅತ್ತ ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ 34 ರನ್ ಗಳಿಸಿ ಔಟಾಗುತ್ತಿದ್ದಂತೆ ಇತ್ತ ಟ್ರಾವಿಸ್ ಹೆಡ್ ಕೂಡ 10 ಎಸೆತಗಳಲ್ಲಿ 17 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು.

3ನೇ ವಿಕೆಟ್‌ಗೆ ಇಶಾನ್ ಕಿಶನ್ ಮತ್ತು ಕ್ಲಾಸೆನ್ ಜೋಡಿ 27 ಎಸೆತಗಳಲ್ಲಿ 48 ರನ್, 4ನೇ ವಿಕೆಟಿಗೆ ಕಿಶನ್-ಅನಿಕೇತ್ ವರ್ಮಾ ಜೋಡಿ 17 ಎಸೆತಗಳಲ್ಲಿ ಸ್ಫೋಟಕ 43 ರನ್ ಚಚ್ಚಿ ತಂಡದ ಮೊತ್ತ ಹೆಚ್ಚಿಸಿತು. ಇನ್ನೂ ಕೊನೆಯಲ್ಲಿ ನ್ಯಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಇಶಾನ್ ಕಿಶನ್ ಜೋಡಿ ಕೇವಲ 18 ಎಸೆತಗಳಲ್ಲಿ 43 ರನ್ ಚಚ್ಚಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಹೈದರಾಬಾದ್ ಪರ 195.83 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇಶಾನ್ ಕಿಶನ್ ಅಜೇಯ 94 ರನ್ (48 ಎಸೆತ, 5 ಸಿಕ್ಸರ್, 7 ಬೌಂಡರಿ) ಚಚ್ಚಿದ್ರೆ , ಅಭಿಷೇಕ್ ಶರ್ಮಾ 34 ರನ್, ಟ್ರಾವಿಸ್ ಹೆಡ್ 17 ರನ್, ಹೆನ್ರಿಕ್ ಕ್ಲಾಸೆನ್ 24 ರನ್, ಅನಿಕೇತ್ ವರ್ಮಾ 26 ರನ್, ಅಭಿನವ್ ಮನೋಹರ್ 12 ರನ್, ಪ್ಯಾಟ್ ಕಮ್ಮಿನ್ಸ್ ಅಜೇಯ 13 ರನ್ ಗಳಿಸಿದರು.

ಇನ್ನೂ ಆರ್‌ಸಿಬಿ ಪರ ರೊಮಾರಿಯೊ ಶೆಫರ್ಡ್ 2 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

Share This Article