ಕೊಡಗಿನ ವೀರಯೋಧ ಅಜ್ಜಮಾಡ ದೇವಯ್ಯರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

Public TV
2 Min Read

ಮಡಿಕೇರಿ: ಭಾರತ ಪಾಕ್ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿ ವೀರಮರಣವನ್ನಪ್ಪಿದ ಕೊಡಗಿನ ವೀರಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಆರು ಮೂಕ್ಕಾಲು ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದ್ದು, ನಗರದ ದೇವಯ್ಯ ವೃತ್ತದಲ್ಲಿ ಇಂದು ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಅಜ್ಜಮಾಡ ಕುಟುಂಬಸ್ಥರು, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೆಮೋರಿಯಲ್ ಟ್ರಸ್ಟ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಮತ್ತು ಕೊಡವ ಮಕ್ಕಡ ಕೂಟ ಆಶ್ರಯದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಲಾಯಿತು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಪ್ರತಿಮೆ ತಲೆಎತ್ತಲಿರುವ ಜಾಗದಲ್ಲಿ ಇರುವ ಹೈ ಮಾಸ್ಕ್ ದೀಪವನ್ನು ನಾಳೆಯೇ ತೆರವುಗೊಳಿಸಬೇಕು, ನಾಳೆಯಿಂದಲೇ ಇಲ್ಲಿ ಪ್ರತಿಮೆ ನಿರ್ಮಾಣ ಸಂಬಂಧ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೊಮೇರಿಯಲ್ ಟ್ರಸ್ಟ್ ನ ಅಜ್ಜಮಾಡ ಕಟ್ಟಿ ಮಂದಯ್ಯ, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಮಾಜಿ ಸೈನಿಕರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪತ್ರಿಮೆ ಈಗಾಗಲೇ ಸಿದ್ಧವಾಗಿದ್ದು, ಅಜ್ಜಮಾಡ ಐನ್‍ಮನೆಯಲ್ಲಿದೆ. ಕಂಚಿನ ಪ್ರತಿಮೆಗೆ 20 ಲಕ್ಷ ರೂ. ವೆಚ್ಚವಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ಪುತ್ಥಳಿಯನ್ನು ಸಿದ್ಧಗೊಳಿಸಲಾಗಿದೆ.

ಯಾರಿದು ಅಜ್ಜಮಾಡ ದೇವಯ್ಯ?
ದೇವಯ್ಯ ವಿರಾಜಪೇಟೆ ತಾಲೂಕಿನ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಅಜ್ಜಮಾಡ ಕುಟುಂಬದ ಬೋಪಯ್ಯ ಹಾಗೂ ನೀಲಮ್ಮ ದಂಪತಿ ಪುತ್ರ. 1932 ಡಿ. 24ರಂದು ದೇವಯ್ಯ ಅವರು ಜನಿಸಿದರು. ದೇವಯ್ಯ ಅವರು 1954 ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಪೈಲಟ್ ಆಗಿ ನೇಮಕಗೊಂಡರು. 1965ರಲ್ಲಿ ಪಾಕಿಸ್ತಾನ ಭಾರತದ ಯುದ್ಧದಲ್ಲಿ ಅಜ್ಜಮಾಡ ದೇವಯ್ಯ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿ ಹಿಂತಿರುಗುತ್ತಿದ್ದಾಗ ಪಾಕಿಸ್ತಾನದ ಯುದ್ಧ ವಿಮಾನ ಹಿಂಬಾಲಿಸಿ ಬರುತಿತ್ತು. ದೇವಯ್ಯ ಅವರು ಈ ಸಂದರ್ಭ ಪಾಕ್ ಸೈನಿಕರಿಂದ ತಪ್ಪಿಸಿಕೊಳ್ಳುವ ಎಲ್ಲ ಅವಕಾಶವೂ ಇತ್ತು. ಆದರೂ ಅವರು ಭಾರತದ ಉಳಿದ ವಿಮಾನಗಳ ರಕ್ಷಣೆಗಾಗಿ ಪಾಕ್ ವಿಮಾನದೊಂದಿಗೆ ಕಾದಾಟಕ್ಕೆ ನಿಂತು, ತಮ್ಮ ದುರ್ಬಲ ವಿಮಾನದಲ್ಲಿ ಕೆಚ್ಚೆದೆಯಿಂದ ನೇರವಾಗಿ ಹೋರಾಡಿ, ಶತ್ರುವಿನ ವಿಮಾನವನ್ನು ಹೊಡೆದುರುಳಿಸಿ ತಾವು ಕೂಡ ಹುತಾತ್ಮರಾದರು.

1965ರಲ್ಲಿ ದೇವಯ್ಯ ಅವರ ಫೈಟರ್ ವಿಮಾನ ಕಣ್ಮರೆಯಾದ ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸೇನೆ ಅವರನ್ನು ನಾಪತ್ತೆಯಾದವರ ಪಟ್ಟಿಗೆ ಸೇರಿಸಿತ್ತು. ಆದರೆ 1979ರಲ್ಲಿ ಬ್ರಿಟನ್ ಲೇಖಕರೊಬ್ಬರು ಬರೆದ ಪುಸ್ತಕದಲ್ಲಿ ದೇವಯ್ಯ ತನ್ನ ಪ್ರಾಣ ಹಂಗನ್ನು ತೊರೆದು ದೇಶದ ರಕ್ಷಣೆಗೆ ಮುಂದಾದ ಸಂದರ್ಭವನ್ನು ಹೇಳಿದ್ದರು. ನಂತರ ಸರ್ಕಾರ ದೇವಯ್ಯ ಅವರನ್ನು ಹುತಾತ್ಮರೆಂದು ಪರಿಗಣಿಸಿ 1988ರಲ್ಲಿ ಮರಣೋತ್ತರ ಮಹಾವೀರ್ ಪ್ರಶಸ್ತಿ ನೀಡಿ ಗೌರವಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *