ಸಿಹಿಗೆಣಸನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ. ಸಿಹಿಗೆಣಸಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದನ್ನು ನಮ್ಮ ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ಕಣ್ಣುಗಳ ದೃಷ್ಟಿ ವೃದ್ಧಿಸುವುದಲ್ಲದೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವತ್ತು ಮಕ್ಕಳಿಗೆ ಇಷ್ಟವಾಗುವಂತಹ ಸಿಹಿಗೆಣಸಿನ ವೆಡ್ಜಸ್ ಯಾವ ರೀತಿ ಮಾಡಬಹುದು ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇವೆ. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಮಕ್ಕಳಿಗೆ ನೀಡಿ ಟೇಸ್ಟಿ, ಹೆಲ್ದಿ ಬೀಟ್ರೂಟ್ ಕಟ್ಲೆಟ್
ಬೇಕಾಗುವ ಸಾಮಗ್ರಿಗಳು:
ಸಿಹಿ ಗೆಣಸು- 3
ಆಲಿವ್ ಆಯಿಲ್- 3 ಚಮಚ
ಬೆಳ್ಳುಳ್ಳಿ ಪೌಡರ್- ಮುಕ್ಕಾಲು ಚಮಚ
ಒರೆಗಾನೋ- ಒಂದೂವರೆ ಚಮಚ
ಪೆಪ್ಪರ್ ಪೌಡರ್- ಕಾಲು ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
- ಮೊದಲಿಗೆ ಓವನ್ ಅನ್ನು 430 ಡಿಗ್ರಿಯಲ್ಲಿ ಮೊದಲೇ ಬಿಸಿಗೆ ಇಡಿ. ಬಳಿಕ ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಅರ್ಧರ್ಧ ಕತ್ತರಿಸಿಕೊಂಡು ಫ್ರೆಂಚ್‌ಫ್ರೈಸ್ ರೀತಿಯಲ್ಲಿ ಉದ್ದುದ್ದ ಹೆಚ್ಚಿಕೊಳ್ಳಿ. ತುಂಬಾ ತೆಳ್ಳಗೆ ಹೆಚ್ಚಿಕೊಳ್ಳದೆ ಸ್ವಲ್ಪ ದಪ್ಪವಾಗಿಯೇ ಹೆಚ್ಚಿಕೊಳ್ಳಿ. ನಂತರ ಅದನ್ನು ಸ್ವಲ್ಪ ಆರಿಸಿ. ತೊಳೆದ ನೀರಿನ ಅಂಶ ಸಂಪೂರ್ಣವಾಗಿ ಹೋದರೆ ವೆಡ್ಜಸ್ ಗರಿಗರಿಯಾಗಿರುತ್ತದೆ.
- ಬಳಿಕ ಸಿಹಿ ಗೆಣಸಿನ ತುಂಡುಗಳನ್ನು ಆಲಿವ್ ಆಯಿಲ್‌ನಲ್ಲಿ ಅದ್ದಿಕೊಳ್ಳಿ. ನಂತರ ಇದಕ್ಕೆ ಬೆಳ್ಳುಳ್ಳಿ ಪೌಡರ್, ಓರೆಗಾನೋ, ಪೆಪ್ಪರ್ ಪೌಡರ್ ಮತ್ತು ಉಪ್ಪನ್ನು ಸೇರಿಸಿಕೊಳ್ಳಿ. ಅಲ್ಲದೇ ನೀವು ಇಷ್ಟಪಡುವ ಯಾವುದೇ ಮಸಾಲೆಯನ್ನಾದರೂ ಸೇರಿಸಿಕೊಳ್ಳಿ. ಉದಾಹರಣೆಗೆ ಚಾಟ್ ಮಸಾಲ, ಗರಂ ಮಸಾಲ, ಮ್ಯಾಗಿ ಮಸಾಲ ಈ ರೀತಿ ನಿಮ್ಮ ಇಷ್ಟದ ಮಸಾಲೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ನಂತರ ಒಂದು ಟ್ರೇಗೆ ಬೇಕಿಂಗ್ ಪೇಪರ್ ಹಾಕಿಕೊಂಡು ಅದರ ಮೇಲೆ ಮಸಾಲೆಗಳಿಂದ ತುಂಬಿದ ಸಿಹಿ ಗೆಣಸಿನ ತುಂಡುಗಳನ್ನು ಇರಿಸಿ. ಒಂದಕ್ಕೊಂದು ಅಂಟದಂತೆ ಸ್ವಲ್ಪ ದೂರ ದೂರ ಇರಿಸಿದರೆ ಒಳ್ಳೆಯದು. ಬಳಿಕ ಇದನ್ನು ಓವನ್‌ನಲ್ಲಿ 15ರಿಂದ 20 ನಿಮಿಷಗಳವರೆಗೆ ಬೇಯಿಸಿಕೊಳ್ಳಿ. ನಂತರ ಅದನ್ನು ತಿರುವಿ ಹಾಕಿಕೊಂಡು ಗೊಲ್ಡನ್ ಕಲರ್ ಬರುವವರೆಗೆ 10 ನಿಮಿಷ ಬೇಯಿಸಿಕೊಳ್ಳಿ. ನಂತರ ಅದನ್ನು ಓವನ್‌ನಿಂದ ಹೊರತೆಗೆದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಟೊಮೆಟೊ ಕೆಚಪ್ ಜೊತೆಗೆ ಸವಿಯಲು ಕೊಡಿ. ಇದನ್ನೂ ಓದಿ: ಬಿಸಿಲಿನಿಂದ ಬಳಲಿದವರಿಗೆ ಪವರ್ ಕೊಡುತ್ತೆ ಈ ಮಿಲ್ಕ್‌ಶೇಕ್