ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ಎಸ್‍ಪಿಜಿ ಮಸೂದೆ ಪಾಸ್

Public TV
1 Min Read

ನವದೆಹಲಿ: ವಿಶೇಷ ಭದ್ರತಾ ಪಡೆ(ತಿದ್ದುಪಡಿ) ಮಸೂದೆ-2019 ಇಂದು ರಾಜ್ಯಸಭೆಯಲ್ಲಿ ಪಾಸ್ ಆಗಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ.

ಮಂಗಳವಾರ ಸಂಜೆ ಅಂತಿಮವಾಗಿ ಮಸೂದೆಯನ್ನು ಪಾಸ್ ಮಾಡಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಈ ವೇಳೆ ಕಾಂಗ್ರೆಸ್ ಸದನದಿಂದ ಹೊರ ನಡೆಯಿತು. ನಂತರ ಮಸೂದೆಯನ್ನು ಪಾಸ್ ಮಾಡಲಾಯಿತು.

ಎಸ್‍ಪಿಜಿ ಮಸೂದೆಯು ಈಗಾಗಲೇ ಲೋಕಸಭೆಯಲ್ಲಿ ಪಾಸ್ ಆಗಿತ್ತು. ಮಂಗಳವಾರ ರಾಜ್ಯಸಭೆಯಲ್ಲಿ ಚರ್ಚಿಸಿ ಅನುಮತಿ ಪಡೆಯಲಾಯಿತು. ಇದೀಗ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ.

ಮೇಲ್ಮನೆಯಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ಅಮಿತ್ ಶಾ ಅವರು ಕಾಂಗ್ರೆಸ್ ಆರೋಪವನ್ನು ತಿರಸ್ಕರಿಸಿದರು. ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮೊದಲೆ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ. ಇದು ಎಸ್‍ಪಿಜಿ ಕಾಯ್ದೆಗೆ ತಂದಿರುವ 5ನೇ ತಿದ್ದುಪಡಿಯಾಗಿದ್ದು, ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಈ ತಿದ್ದುಪಡಿ ಮಾಡಿಲ್ಲ. ಆದರೆ ಈ ಹಿಂದಿನ ನಾಲ್ಕು ತಿದ್ದುಪಡಿಯನ್ನು ಒಂದೇ ಕುಟುಂಬವನ್ನು ಆಧರಿಸಿ ಮಾಡಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಏಕೆ ಗಾಂಧಿ ಕುಟುಂಬ ಒಂದಕ್ಕೆ ಎಸ್‍ಪಿಜಿ ಭದ್ರತೆ ನೀಡುವಂತೆ ಒತ್ತಾಯಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಪ್ರತಿಷ್ಠೆಯ ಆಧಾರದ ಮೇಲೆ ಭದ್ರತಾ ವ್ಯವಸ್ಥೆಯನ್ನು ಮಾಡಿಲ್ಲ. ಕೇವಲ ಗಾಂಧಿ ಕುಟುಂಬಕ್ಕೆ ಮಾತ್ರ ಮಾತ್ರ ಏಕೆ ಎಸ್‍ಪಿಜಿ ಭದ್ರತೆ ಬೇಕು? ಎಸ್‍ಪಿಜಿ ಭದ್ರತೆಯನ್ನು ರಾಷ್ಟ್ರದ ಮುಖ್ಯಸ್ಥರಿಗೆ ಮಾತ್ರ ನೀಡಲಾಗುತ್ತಿದೆ. ಇವರ ಹೊರತು ಯಾರಿಗೂ ಈ ಭದ್ರತೆಯನ್ನು ನೀಡುತ್ತಿಲ್ಲ. ನಾವು ಒಂದು ಕುಟುಂಬವನ್ನು ದೂಷಿಸುತ್ತಿಲ್ಲ. ಇದರಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಗಾಂಧಿ ಕುಟುಂಬಕ್ಕೆ ಮಾತ್ರವಲ್ಲ ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಐ.ಕೆ.ಗುಜ್ರಾಲ್, ಚಂದ್ರಶೇಖರ್, ಎಚ್.ಡಿ.ದೇವೇಗೌಡ ಹಾಗೂ ಮನಮೋಹನ್ ಸಿಂಗ್ ಅವರ ಭದ್ರತೆಯನ್ನು ಸಹ ಕಡಿಮೆ ಮಾಡಲಾಗಿದೆ ಎಂದು ಇದೇ ವೇಳೆ ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *