2.5 ಮಿಲಿಯನ್ ಲೀಟರ್ ನೀರು ಹೊತ್ತು ಚೆನ್ನೈ ತಲುಪಿದ ವಿಶೇಷ ರೈಲು

Public TV
1 Min Read

ಚೆನ್ನೈ: 2.5 ಮಿಲಿಯನ್ ಲೀಟರ್ ನೀರನ್ನು ಹೊತ್ತುಕೊಂಡು ಬಂದು ವಿಷೇಶ ರೈಲು ಇಂದು ಚೆನ್ನೈ ತಲುಪಿದ್ದು, ಈ ಮೂಲಕ ನೀರಿಲ್ಲದೆ ಪರದಾಡುತ್ತಿರುವ ಅಲ್ಲಿನ ನಿವಾಸಿಗಳ ಮೊಗದಲ್ಲಿ ಕೊಂಚ ನಗು ಮೂಡಿಸಿದೆ.

ಸದ್ಯ ಚೆನ್ನೈನಲ್ಲಿ ನೀರಿಲ್ಲದೆ ಜನರು ತತ್ತರಿಸಿ ಹೋಗಿದ್ದಾರೆ. ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನೀರು ಪೂರೈಸಲು ವಿಶೇಷ ರೈಲು ಚೆನ್ನೈನತ್ತ ಹೊರಟಿತ್ತು. ಬರೋಬ್ಬರಿ 2.5 ಮಿಲಿಯನ್ ಲೀಟರ್ ನೀರನ್ನು ಟ್ಯಾಂಕರ್ ಗಳ ಮೂಲಕ ರೈಲಿನಲ್ಲಿ ಸಾಗಿಸಲಾಗಿದೆ. ಚೆನ್ನೈಗೆ ನೀರು ಸಾಗಿಸುವ ಮೊದಲ ರೈಲು ಇಂದು ಬೆಳಗ್ಗೆ ವೆಲ್ಲೂರು ಜಿಲ್ಲೆಯ ಜೊಲಾರ್‍ಪೇಟೆ ರೈಲ್ವೆ ನಿಲ್ದಾಣದಿಂದ ಹೊರಟು ತಮಿಳುನಾಡಿನ ರಾಜಧಾನಿ ತಲುಪಿದೆ ಎಂದು ವರದಿಯಾಗಿದೆ.

ದಕ್ಷಿಣ ರೈಲ್ವೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ತಮಿಳುನಾಡಿನ ವೆಲ್ಲೂರು ಜಿಲ್ಲೆಯಿಂದ ನೀರು ಸಾಗಿಸುವ ವಿಶೇಷ 50 ವ್ಯಾಗನ್ ರೈಲು ಶುಕ್ರವಾರ ಮಧ್ಯಾಹ್ನ ಚೆನ್ನೈ ತಲುಪಲಿದೆ ಎಂದು ತಿಳಿಸಿದ್ದರು. ಜೋಲಾರ್‍ಪೆಟ್ ನಿಲ್ದಾಣದಿಂದ ಹೊರಟ ವಿಶೇಷ ರೈಲಿನ ಪ್ರತಿಯೊಂದು ವ್ಯಾಗನ್ 50,000 ಲೀಟರ್ ನೀರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಹಿಂದೆ ರೈಲಿನ ಮೂಲಕ 10 ಮಿಲಿ ಲೀಟರ್ ನೀರನ್ನು ಜೋಲಾರ್‍ಪೆಟ್‍ನಿಂದ ಚೆನ್ನೈಗೆ ಸಾಗಿಸುವುದಾಗಿ ಮುಖ್ಯಮಂತ್ರಿ ಕೆ. ಎಡಪ್ಪಾಡಿ ಪಳನಿಸ್ವಾಮಿ ಅವರು ಘೋಷಿಸಿದ್ದರು. ಅಲ್ಲದೆ ಇದಕ್ಕಾಗಿಯೇ 65 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದರು.

ಸದ್ಯ ಚೆನ್ನೈ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಚೆನ್ನೈ ಮೆಟ್ರೋ ವಾಟರ್) ದಿನಕ್ಕೆ ಸುಮಾರು 525 ಮಿಲಿಯನ್ ಲೀಟರ್ (ಎಂಎಲ್‍ಡಿ) ನೀರನ್ನು ನಗರದಲ್ಲಿ ಪೂರೈಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚೆನ್ನೈಗೆ ನೀರು ಪೂರೈಸುವ ಚೋಳವರಂ (ಪೂರ್ಣ ಸಾಮರ್ಥ್ಯ 1,081 ಎಂಸಿಎಫ್‍ಟಿ) ಮತ್ತು ರೆಡ್‍ಹಿಲ್ಸ್ (ಪೂರ್ಣ ಸಾಮರ್ಥ್ಯ 3,300 ಎಮ್‍ಸಿಎಫ್‍ಟಿ) ಜಲಾಶಯಗಳು ಮತ್ತು ಚೆಂಬರಂಬಕ್ಕಂ ಸರೋವರ (ಪೂರ್ಣ ಸಾಮರ್ಥ್ಯ 3,645 ಎಮ್‍ಸಿಎಫ್‍ಟಿ) ಒಣಗಿದೆ. 16 ಎಂಸಿ ಅಡಿ ನೀರನ್ನು ಪೂಂಡಿ(ಪೂರ್ಣ ಸಾಮರ್ಥ್ಯ 3,231ಎಮ್‍ಸಿಎಫ್‍ಟಿ) ಜಲಾಶಯದಿಂದ ಬಿಡಲಾಗಿದೆ ಎಂದು ಚೆನ್ನೈ ಮೆಟ್ರೋ ವಾಟರ್ ಕಾರ್ಪೊರೇಶನ್ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *