ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪ್ರವಚನದ ವೇಳೆ ಮೊಸಳೆ ಪ್ರತ್ಯಕ್ಷ

Public TV
2 Min Read

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಕೇರಳದ ಗಡಿಯಲ್ಲಿರುವ ಕುಂಬಳೆಯ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರವಚನದ ವೇಳೆ ಕ್ಷೇತ್ರದಲ್ಲಿ ವಿರಳವಾಗಿ ಕಂಡು ಬರುವ ಮೊಸಳೆ ಪ್ರತ್ಯಕ್ಷವಾಗಿ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಶ್ರೀಮದ್ಭಾಗವತ ಸಪ್ತಾಹ ಯಜ್ಞದ ಅಂಗವಾಗಿ ಮೂರನೇ ದಿನವಾದ ಭಾನುವಾರ ಗಜೇಂದ್ರ ಮೋಕ್ಷದ ಪ್ರವಚನದ ವೇಳೆ ಸರೋವರದ ನೈಋತ್ಯ ಭಾಗದಲ್ಲಿ ಮೊಸಳೆ ಬಾಯ್ತೆರೆದು ನಿಂತಿತ್ತು. ವಿಶೇಷ ಏನೆಂದರೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮೊಸಳೆ ಹಾಗೆ ಇದ್ದಿದ್ದನ್ನು ನೋಡಿ ದೇಗುಲದ ಕಾಯಕರ್ತರು, ಭಕ್ತರು ಅಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಒಂದು ಗಂಟೆಯ ಬಳಿಕ ಮೊಸಳೆ ಅಲ್ಲಿಂದ ತೆರಳಿ ನೀರಿನ ಮೂಲಕ ಸಾಗಿ ಗುಹೆಯನ್ನು ಸೇರಿಕೊಂಡಿತ್ತು. ಯಜ್ಞಾಚಾರ್ಯ ಬ್ರಹ್ಮಶ್ರೀ ಪೆರಿಗಮನ ಶ್ರೀಧರ್ ನಂಬೂದಿರಿ ಮತ್ತು ವೇದಮೂರ್ತಿ ಕೇಕಣಾಜೆ ಕೇಶವ ಭಟ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಅಚ್ಚರಿ ಯಾಕೆ?
ಅನಂತಪುರ ಕ್ಷೇತ್ರದಲ್ಲಿರುವ ಈ ಮೊಸಳೆ ಹೆಚ್ಚಿನ ಸಂದರ್ಭದಲ್ಲಿ ದೇವಾಲಯದ ಎಡಬದಿಯಲ್ಲಿರುವ ಗುಹೆಯಲ್ಲಿ ಇರುತ್ತದೆ. ಮಧ್ಯಾಹ್ನ ದೇವಾಲಯದ ನೈವೇದ್ಯವನ್ನು ಇಟ್ಟು ಮೊಸಳೆಯನ್ನು ಕರೆಯಲಾಗುತ್ತದೆ. ಈ ವೇಳೆ ಆಹಾರ ಸ್ವೀಕರಿಸಿ ತೆರಳುವ ಮೊಸಳೆ ಬಳಿಕ ಯಾರಿಗೂ ಕಾಣಿಸುವುದಿಲ್ಲ. ಆದರೆ ಈ ಬಾರಿ ಹಗಲಿನಲ್ಲಿ ಅದರಲ್ಲೂ ಗಜೇಂದ್ರ ಮೋಕ್ಷದ ಪಾರಾಯಣ ನಡೆಯುತ್ತಿರುವ ವೇಳೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಕ್ತರ ಅಚ್ಚರಿಗೆ ಕಾರಣವಾಗಿದೆ.

ಹೋಗುವುದು ಹೇಗೆ?
ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರವಿರುವ ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಅನಂತಪುರ ದೇವಾಲಯವಿದೆ. ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲ ಸ್ಥಾನವೆಂಬುದು ಪುರಾಣ ಕಥೆಗಳಲ್ಲಿ ಕಾಣಬಹುದು. ಮಾತ್ರವಲ್ಲದೆ, ಕೆರೆಯ ಬದಿಯಲ್ಲಿ ಒಂದು ಸುರಂಗ ಮಾರ್ಗವೂ ಇದ್ದು, ಈ ಸುರಂಗದ ಮೂಲಕ ತಿರುವನಂತಪುರದ ದೇವಸ್ಥಾನ ತಲುಪಬಹುದು ಎಂದು ಪ್ರತೀತಿ. ದೇವಸ್ಥಾನದಲ್ಲಿ ಸಾಮಾನ್ಯವಾಗಿ ವಿಗ್ರಹವು ಕಲ್ಲಿನಿಂದಲೋ, ಲೋಹದಿಂದಲೋ ಕೆತ್ತಲ್ಪಟ್ಟಿರುತ್ತದೆ. ಆದರೆ ಇಲ್ಲಿನ ದೇವರ ಮೂರ್ತಿಯು ಸಂಪೂರ್ಣವಾಗಿ ಆಯುರ್ವೇದದ ಗಿಡಮೂಲಿಕೆಗಳಿಂದ, ವಿವಿಧ ದ್ರವ್ಯಗಳ ಲೇಪನದಿಂದ ತಯಾರಿಸಿದ್ದಾಗಿದೆ. ಇದಕ್ಕೆ ‘ಕಡುಶರ್ಕರ ಪಾಕ’ದ ವಿಗ್ರಹ ಎಂದು ಹೆಸರಿದೆ.

ದೇವರ ಮೊಸಳೆ ಬಬಿಯಾ:
ಹಲವಾರು ದೇವಸ್ಥಾನಗಳಲ್ಲಿ ದೇವರ ಆನೆ, ಬಸವ ಇತ್ಯಾದಿ ಪ್ರಾಣಿಗಳಿಗಳಿರುತ್ತದೆ. ಆದರೆ ಈ ದೇವಾಲದ ಕೆರೆಯ ನಡುವಿನಲ್ಲಿ ನೆಲೆಸಿರುವ ‘ಅನಂತಪದ್ಮಾನಾಭನಿಗೆ ಮೊಸಳೆ-ಬಬಿಯಾ’ ‘ಕಾವಲು ಕಾಯುವ ಕೆಲಸ’ ಮಾಡುತ್ತದೆ ಎನ್ನುವ ನಂಬಿಕೆ ಇದೆ. ವರ್ಷದ ಎಲ್ಲಾ ದಿನವೂ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯಲ್ಲಿ ಈ ಮೊಸಳೆಯೂ ಕೂಡ ಇಲ್ಲೇ ವಾಸವಾಗಿರುತ್ತದೆ. ದೇವರ ನೈವೇಧ್ಯವೇ ಇದಕ್ಕೆ ನಿತ್ಯ ಆಹಾರ. ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಸ್ವಚ್ಚಂದವಾಗಿ ಜೀವನ ನಡೆಸುತ್ತಿದೆ. ಹಾಗೆಂದು ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳೇ ಇಲ್ಲವಂತೆ.

ಈ ದೇವಾಲಯದ ಹತ್ತಿರದಲ್ಲಿ ಶ್ರೀ ಮಹಾಗಣಪತಿಯ ಗುಡಿಯ ಇದೆ. ಅಷ್ಟೇ ಅಲ್ಲದೇ ಪುರಾತನ ಕಾಲದ ತುಳುಶಾಸನ ಇದೆ. ಪ್ರಧಾನ ದೇವಾಲಯದ ಬದಿಯಲ್ಲಿಯೇ ಗೋಶಾಲಕೃಷ್ಣ ದೇವರು, ಸ್ವಲ್ಪ ದೂರದಲ್ಲಿ ರಕ್ತೇಶ್ವರಿ ಗುಡಿಯನ್ನೂ ಕಾಣಬಹುದು. ಹಾಗೆಯೇ ಶ್ರೀ ವನಶಾಸ್ತಾರ ಗುಡಿಯೂ ಇದೆ. ಈ ಗುಡಿ ಬಳಿಯೇ ಇನ್ನೊಂದು ಸಣ್ಣ ಕೆರೆ ಕಾಣಬಹುದು. ದೇವಾಲಯದ ವೆಬ್ ಸೈಟ್: www.ananthapuratemple.com

Share This Article
Leave a Comment

Leave a Reply

Your email address will not be published. Required fields are marked *