ಗೌಡರ ಕುಟುಂಬಕ್ಕೆ ಶುರುವಾಗಿದೆಯಾ ಸೋಲಿನ ಗುಮ್ಮ..!

Public TV
1 Min Read

ಚಿಕ್ಕಮಗಳೂರು: ಅತ್ತ ವಿರೋಧಿಗಳು ಗೌಡರ ಮೊಮ್ಮಕ್ಕಳನ್ನು ಖೆಡ್ಡಾಗೆ ಕೆಡವಲು ರಣತಂತ್ರ ರೂಪಿಸುತ್ತಿದ್ದಾರೆ. ಬಹುಶಃ ಇದಕ್ಕಾಗಿಯೇ ಶೃಂಗೇರಿ ಶಾರದಾಂಬೆಯಲ್ಲಿ ಸತತವಾಗಿ ಗೌಡರ ಕುಟುಂಬದಿಂದ ಪೂಜೆ ನಡೆಯುತ್ತಿವೆ. ಇದೀಗ ನಿಖಿಲ್ ನಾಮಪತ್ರವನ್ನ ಶಾರದೆಯ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಲು ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಇದಕ್ಕಾಗಿಯೇ ಇಂದು ಸಿಎಂ ಶೃಂಗೇರಿಗೆ ದೌಡಾಯಿಸುತ್ತಿದ್ದಾರೆ.

ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಶಾರದಾಂಬೆ ಸನ್ನಿಧಾನಕ್ಕೆ ಹೋಗುತ್ತಾರೆ. ಅದರಲ್ಲೂ ಎಲೆಕ್ಷನ್ ಬಂದ್ರೂ ಅಂತೂ ಅವ್ರು ಶಾರದಾಂಬೆಗೆ ಪೂಜೆ ಸಲ್ಲಿಸದೇ ಮುಂದೆ ಹೋಗಲ್ಲ. ಆದ್ರೆ ಇತ್ತೀಚೆಗೆ ತಿಂಗಳು, ಹದಿನೈದು ದಿನಕ್ಕೊಮ್ಮೆಯಂತೆ ಶೃಂಗೇರಿಯಲ್ಲಿ ಗೌಡರ ಕುಟುಂಬ ಪೂಜೆ, ಯಾಗಗಳನ್ನು ಮಾಡುತ್ತಾ ಬರುತ್ತಿದೆ. ಇದನ್ನ ನೋಡಿದ್ರೆ ಗೌಡರ ಕುಟುಂಬಕ್ಕೆ ಚುನಾವಣೆ ಸೋಲಿನ ಗುಮ್ಮ ಕಾಡ್ತಾ ಇದೆ ಯೇನೋ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಕುಮಾರಸ್ವಾಮಿ ಸಿಎಂ ಅಧಿಕಾರ ಪಡೆದ ನಂತರ ರಾಜ್ಯದ ಬಹುತೇಕ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೀಗ ತಮ್ಮ ಪುತ್ರ ನಿಖಿಲ್ ನನ್ನು ಮಂಡ್ಯದ ಕದನ ಕಣಕ್ಕೆ ಇಳಿಸಿರೋ ಸಿಎಂ ಮಗನ ಗೆಲುವಿಗಾಗಿ ಶೃಂಗೇರಿ ಶಾರದಾಂಬೆ ಮೊರೆ ಹೋಗಿದ್ದಾರೆ. ಭಾನುವಾರ ಮನೆಯಲ್ಲೇ ಹೋಮ, ಹವನ ನಡೆಸಿದ ಬಳಿಕ ಇಂದು ಬೆಳಗ್ಗೆ 10.15ಕ್ಕೆ ಶೃಂಗೇರಿಗೆ ಭೇಟಿ ಕೊಟ್ಟು ನಾಮಪತ್ರವನ್ನು ಶಾರದಾಂಬೆ ಪಾದದಡಿ ಇಟ್ಟು ಪೂಜೆ ಸಲ್ಲಿಸಲಿದ್ದಾರೆ.

ಕಳೆದ ವಾರವಷ್ಟೇ ನಿಖಿಲ್ ಗೆಲುವಿಗಾಗಿ ಚಂಡಿಕಾಯಾಗ ನಡೆಸಲಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ನಂತರದ ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿದಾಗಲೂ ನಾಮಪತ್ರಕ್ಕೆ ಪೂಜೆ ಸಲ್ಲಿಸಲಾಗಿತ್ತು. ಬುಧವಾರ ಸಚಿವ ಹೆಚ್.ಡಿ.ರೇವಣ್ಣ ತಮ್ಮ ಕುಟುಂಬದೊಂದಿಗೆ ಶಾರದಾಂಬೆ ಸನ್ನಿಧಿಗೆ ಬಂದು ನಾಮಪತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *