ಸಿಎಂ ಬಿಎಸ್‍ವೈರಿಂದ ಮಕ್ಕಳಿಗಾಗಿ ವಿಶೇಷ ಬಜೆಟ್?

Public TV
1 Min Read

ಬೆಂಗಳೂರು: 2008 ರಲ್ಲಿ ರೈತರಿಗಾಗಿ ಪ್ರತ್ಯೇಕ ರೈತ ಬಜೆಟ್ ಮಂಡಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದ ಸಿಎಂ ಯಡಿಯೂರಪ್ಪ, ಈ ಬಾರಿ ಮತ್ತೊಂದು ವಿಶೇಷ ಬಜೆಟ್ ಮಂಡಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಮಾರ್ಚ್ 5 ರಂದು 2020-21ನೇ ಸಾಲಿನ ಬಜೆಟನ್ನು ಯಡಿಯೂರಪ್ಪನವರು ಮಂಡಿಸಲಿದ್ದಾರೆ. ಈ ಬಾರಿ ಮಕ್ಕಳಿಗಾಗಿ ವಿಶೇಷ ಬಜೆಟ್ ಮಂಡಿಸುವ ಚಿಂತನೆಯನ್ನು ಸಿಎಂ ಮಾಡಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ಪ್ರಾರಂಭ ಮಾಡಿದ್ದಾರೆ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅನ್ನೋ ಮಾತಿದೆ. ಹೀಗಾಗಿ ಮಕ್ಕಳ ಅಭಿವೃದ್ಧಿಗೆ ಸಿಎಂ ಪಣ ತೊಟ್ಟಿದ್ದಾರೆ. ಮಕ್ಕಳ ಅಪೌಷ್ಟಿಕತೆ, ಮಕ್ಕಳ ಮರಣ, ಹೆಣ್ಣು ಶಿಶು ಹತ್ಯೆ, ಗರ್ಭಪಾತ, ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು, ಅಪ್ರಾಪ್ತ ಹೆಣ್ಣು ಮಕ್ಕಳ ಬಾಲ್ಯ ವಿವಾಹ, ಶಾಲೆಯಿಂದ ದೂರ ಉಳಿದಿರುವುದು ಹೀಗೆ ಮಕ್ಕಳು ನೂರಾರು ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೆ. ಇವೆಲ್ಲವನ್ನು ಸರಿಪಡಿಸಲು ಈ ಬಜೆಟ್ ನಲ್ಲಿ ವಿಶೇಷ ಕಾರ್ಯಕ್ರಮ ಜಾರಿಗೆ ತರೋದಕ್ಕೆ ನಿರ್ಧಾರ ಮಾಡಿದ್ದಾರೆ. ಬಜೆಟ್‍ನಲ್ಲಿ ಮಕ್ಕಳ ಅಭಿವೃದ್ಧಿ, ಸುಶಿಕ್ಷಣ, ಜನಪ್ರಿಯ ಯೋಜನೆ ಮತ್ತು ಕಾರ್ಯಕ್ರಮಗಳನ್ನ ಜಾರಿಗೆ ತರೋ ಮೂಲಕ ಮಕ್ಕಳ ಸ್ನೇಹ ಬಜೆಟ್ ಗೆ ಸಿಎಂ ನಿರ್ಧಾರ ಮಾಡಿದ್ದಾರೆ.

ಮಕ್ಕಳಿಗಾಗಿ ಬಜೆಟ್ ಮಂಡನೆ ಮಾಡ್ತಿರೋ ಹಿನ್ನೆಲೆಯಲ್ಲಿ ಸಿಎಂ ಎಲ್ಲಾ ಇಲಾಖೆಗಳಿಂದ ಮಾಹಿತಿ ಸಂಗ್ರಹ ಮಾಡ್ತಿದ್ದಾರೆ. ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಮಕ್ಕಳ ಕೇಂದ್ರಿತ ಯೋಜನೆ, ಕಾರ್ಯಕ್ರಮಗಳ ವಿವರ, ಅನುದಾನ ಹಂಚಿಕೆ, ಖರ್ಚು, ಕಾರ್ಯನೀತಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡ್ತಿದ್ದಾರೆ. ಈ ಮಾಹಿತಿಗಳ ಆಧಾರದಲ್ಲಿ ಆಯವ್ಯಯದಲ್ಲಿ ಅಳವಡಿಸಬೇಕಾದ ಕಾರ್ಯಕ್ರಮಗಳನ್ನ ವರ್ಗೀಕರಣ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡುವಂತೆ ಆರ್ಥಿಕ ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ.

2008ರಲ್ಲಿ ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಯೋಜನೆ ಮೂಲಕ ಮನೆ ಮಾತಾಗಿದ್ರು. ಈ ಬಜೆಟ್ ನಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಆರೋಗ್ಯ ಶಿಕ್ಷಣ, ತರಬೇತಿ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳ ಮೂಲಕ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಒತ್ತು ನೀಡಲು ತೀರ್ಮಾನ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *