ನೀವು ಮನೆಯಿಂದ ಹೊರ ಬಂದ್ರೆ ವೈದ್ಯರು, ಪೊಲೀಸರ ಶ್ರಮ ವ್ಯರ್ಥವಾಗುತ್ತೆ: ಎಸ್‌ಪಿ ಚನ್ನಣ್ಣನವರ್

Public TV
1 Min Read

– ನೆಲಮಂಗಲ ನಗರದಲ್ಲಿ ಎಸ್‌ಪಿ ರವಿ.ಡಿ.ಚನ್ನಣ್ಣನವರ್ ರೌಂಡ್ಸ್

ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಳದಿ ಝೋನ್‍ಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ನೆಲಮಂಗಲ ನಗರಕ್ಕೆ ಎಸ್‌ಪಿ ರವಿ.ಡಿ.ಚನ್ನಣ್ಣನವರ್ ದಿಢೀರ್ ಭೇಟಿ ನೀಡಿ ನಗರ ಪರಿಶೀಲನೆ ಮಾಡಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚನ್ನಣ್ಣನವರ್, ರಾಜ್ಯ, ಕೇಂದ್ರ ಸರ್ಕಾರ, ಮಾಧ್ಯಮದವರು, ಪೊಲೀಸರು, ಜಿಲ್ಲಾಡಳಿತ, ವೈದ್ಯರು ಶ್ರಮಪಡುತ್ತಿದ್ದಾರೆ. ಅವರ ಶ್ರಮ ನೀವು ಹೊರಗೆ ಬರುವುದರಿಂದ ವ್ಯರ್ಥವಾಗುತ್ತದೆ. ತುಂಬಾ ಅವಶ್ಯಕತೆ ಇದ್ದರೆ ಒಮ್ಮೆ ಬನ್ನಿ. ಇಲ್ಲವಾದರೆ ಮನೆಯಲ್ಲಿರಿ, ಸುರಕ್ಷವಾಗಿರಿ ಎಂದು ಅನಗತ್ಯವಾಗಿ ಹೊರ ಬರುವವರಿಗೆ ಬುದ್ಧಿ ಹೇಳಿದರು. ನಂತರ ಪೊಲೀಸ್ ಸಿಬ್ಬಂದಿಯ ಯೋಗಕ್ಷೇಮ ಸಹ ವಿಚಾರಣೆ ಮಾಡಿದರು.

ನೆಲಮಂಗಲ ಬಸ್ ನಿಲ್ದಾಣದಲ್ಲಿ ಹಸಿದವರಿಗೆ ಅನ್ನ, ತರಕಾರಿ ಇನ್ನಿತರ ವಸ್ತುಗಳನ್ನ ನೀಡುವ ಉದ್ದೇಶದಿಂದ ನೂತನವಾಗಿ ನಿರ್ಮಾಣವಾಗಿರುವ ‘ಕರುಣೆಯ ಗೋಡೆ’ಯನ್ನು ಎಸ್.ಪಿ. ರವಿ.ಡಿ.ಚನ್ನಣ್ಣನವರ್ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಎಸ್‍ಪಿ, ಬಡವರು, ಆಟೋ ಡೈವರ್, ಕೂಲಿ ಕಾರ್ಮಿಕರಿಗೆ ಕರುಣೆಯ ಗೋಡೆಯಿಂದ ತುಂಬಾ ಸಹಾಯವಾಗುತ್ತಿದೆ. ಇದು ಹೀಗೆ ಮುಂದುವರಿಯಲಿ, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಮ್ಮ ತಂಡದವರ ಸಪೋರ್ಟ್ ಕೂಡ ಇದೆ. ಈ ಕೆಲಸದ ಜೊತೆಗೆ ಅನ್ನ ಹಾಕುವ ಕೆಲಸ ಮಾಡುತ್ತಿರುವುದು ಮಾನವೀಯ ಕರ್ತವ್ಯವಾಗಿದೆ ಎಂದರು.

ಈಗಾಗಲೇ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನೆಲಮಂಗಲ ಉಪವಿಭಾಗದಲ್ಲಿ ಸಾವಿರಕ್ಕೂ ಹೆಚ್ಚು ಬೈಕ್‍ಗಳನ್ನ ಪೊಲೀಸರು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. ನೆಲಮಂಗಲದಲ್ಲಿ ಯಾವುದೇ ಕೊರೊನಾ ಪ್ರಕರಣ ಕಂಡು ಬಂದಿಲ್ಲ. ಜನರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ನೆಲಮಂಗಲದಲ್ಲಿ ಸಾರ್ವಜನಿಕರಿಂದ ಲಾಕ್‍ಡೌನ್ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *