ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ

Public TV
2 Min Read

ಚಿತ್ರದುರ್ಗ: ಕೊರೊನಾ ಹರಡದಂತೆ ತಡೆಗಟ್ಟಲು ಜಾರಿಮಾಡಿರುವ ಲಾಕ್‍ಡೌನ್ ಅವಧಿ ವಿಸ್ತರಣೆಯಿಂದಾಗಿ ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ಯಾದಗಿರಿಯ ನಿರಾಶ್ರಿತರ ಮನವೊಲಿಸುವಲ್ಲಿ ಚಿತ್ರದುರ್ಗ ಎಸ್‍ಪಿ ಜಿ. ರಾಧಿಕಾ ಕೊನೆಗೂ ಯಶಸ್ವಿಯಾಗಿದ್ದಾರೆ.

ಭಾರತ ಲಾಕ್‍ಡೌನ್ ವಿಸ್ತರಣೆಯಾದ ಬೆನ್ನಲ್ಲೇ ತಮ್ಮ ಸ್ವಗ್ರಾಮಗಳಿಗೆ ನಮ್ಮನ್ನು ಕಳುಹಿಸಿ ಇಲ್ಲವಾದರೆ ನಮಗೆ ನೀವು ಕೊಡುವ ಅನ್ನ-ನೀರು ಬೇಡವೆಂದು ಹಠಹಿಡಿದು, ಚಿಕ್ಕ ಹಸುಗೂಸುಗಳಿಗೂ ಹಾಲುಣಿಸದಂತೆ ನಿರಾಶ್ರಿತರು ಉಪವಾಸ ಮಾಡುತ್ತಾ ಪಟ್ಟು ಹಿಡಿದಿದ್ದರು.

ಹೀಗಾಗಿ ಅವರನ್ನು ಬುಧವಾರ ಮೊಳಕಾಲ್ಮೂರಿನ ಯರ್ರೇನಹಳ್ಳಿಯಿಂದ ಬೇರೆಡೆಗೆ ಎರಡು ಗುಂಪುಗಳಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಆಗ ಮೊಳಕಾಲ್ಮೂರಿನ ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು ಮಾಹಿತಿಯ ಕೊರತೆಯಿಂದಾಗಿ ನಿರಾಶ್ರಿತರನ್ನೇ ಕೊರೊನಾ ಸೊಂಕಿತರೆಂದು ಭಾವಿಸಿ, ಅವರನ್ನು ನಮ್ಮ ಊರೊಳಗೆ ಕರೆತರಬೇಡಿ ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದರು. ರಾತ್ರಿಯಿಡಿ ಹೋರಾಟ ನಡೆಸಿದ್ದರು.

ಚಿತ್ರದುರ್ಗಕ್ಕೆ ಕರೆ ತರೋಣವೆಂದರೆ ಅಲ್ಲಿನ ಹಾಸ್ಟಲ್‍ಗಳೆಲ್ಲಾ ಭರ್ತಿಯಾಗಿದ್ದವು. ಹೀಗಾಗಿ ಬುಧವಾರ ತಡರಾತ್ರಿ ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಹಾಸ್ಟಲ್‍ಗಳಲ್ಲಿ ಎರಡು ಕಡೆ ಈ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ ಈ ಎಲ್ಲಾ ವಿಷಯವನ್ನು ತಿಳಿದಿದ್ದ ಚಿತ್ರದುರ್ಗ ಎಸ್‍ಪಿ ರಾಧಿಕಾ ಅವರು ಕರ್ತವ್ಯದಲ್ಲಿ ಖಡಕ್ ಅಧಿಕಾರಿ ಆಗಿದ್ದರು ಸಹ ಆ ಚಿಕ್ಕ ಚಿಕ್ಕ ಮಕ್ಕಳ ಪರಿಸ್ಥಿತಿ ಹಾಗೂ ನಿರಾಶ್ರಿತರ ಅಸಹಯಕತೆ ಕಂಡು ಮನದಲ್ಲೆ ಮರುಗಿದ್ದರು.

ಸುಮಾರು 30 ಜನ ಮಕ್ಕಳು ಸೇರಿದಂತೆ 126 ಜನ ನಿರಾಶ್ರಿತರಿರುವ ಕೇಂದ್ರಕ್ಕೆ ಗುರುವಾರ ದಿಡೀರ್ ಧಾವಿಸಿ ಎಸ್‍ಪಿ ಆ ನಿರಾಶ್ರಿತರ ಸಂಕಷ್ಟ ಆಲಿಸಿದರು. ಕರುಣೆ ಹಾಗೂ ಮಾನವೀಯತೆ ಅನ್ನೋದು ಅಧಿಕಾರಿಗಳಲ್ಲೂ ಅಡಗಿರುತ್ತದೆ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಮೊದಲು ಅಧಿಕಾರಿಯಾಗಿ ಕಾನೂನು ಹಾಗೂ ಸದ್ಯದ ವಾತಾವರಣದ ಬಗ್ಗೆ ನಿರಾಶ್ರಿತರಿಗೆ ಅರಿವು ಮೂಡಿಸಿದರು. ಬಳಿಕ ಹಸುಗೂಸುಗಳಿಗೆ ದಯವಿಟ್ಟು ಉಪವಾಸವಿಡಬೇಡಿ ಎಂದು ನಿರಾಶ್ರಿತರಲ್ಲಿ ಮನವಿ ಮಾಡಿದರು. ಅಲ್ಲದೇ ಇಂತಹ ಸಮಸ್ಯೆಗಳು ಸಹಜವಾಗಿದ್ದು, ಕೊರೊಮಾ ಸೋಂಕು ಹರಡದಂತೆ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ಜಾರಿಮಾಡಿದ್ದಾರೆ ಹೊರೆತು ಯಾರ ಮೇಲಿನ ದ್ವೇಷವೇನಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಈಗ ನಾವು ನಿಮ್ಮನ್ನು ನಿಮ್ಮ ಗ್ರಾಮಗಳಿಗೆ ಕಳುಹಿಸಿದರು ಸಹ ನೀವುಗಳು ನಿಮ್ಮ ಊರೊಳಗೆ ಪ್ರವೇಶಿಸೋದು ಸುಲಭವಲ್ಲ ಎಂದು ತಿಳಿ ಹೇಳಿದರು. ನಿರಾಶ್ರಿತರ ಸ್ವಗ್ರಾಮಗಳು ಹಾಗೂ ಅವರ ಜಿಲ್ಲೆಯಲ್ಲಿರುವ ಜನರ ಮನಸ್ಥಿತಿಯ ವಾಸ್ತವವನ್ನು ಅರ್ಥವಾಗುವಂತೆ ಹೇಳಿದರು. ಇದರಿಂದಾಗಿ ಸ್ವಲ್ಪ ಸಮಾಧಾನಗೊಂಡ ನಿರಾಶ್ರಿತರು ರಾಧಿಕಾ ಅವರ ಮಾತಿನಲ್ಲಿದ್ದ ಸತ್ಯವನ್ನು ಯೋಚಿಸಿದ್ದು, ಅವರ ಮನದಲ್ಲಿದ್ದ ಊರಿಗೆ ಹೋಗುವ ಆಸೆಯನ್ನು ತಾತ್ಕಾಲಿಕವಾಗಿ ಬದಿಗಿಟ್ಟಿದ್ದಾರೆ.

ಹಾಗೆಯೇ ನಿರಾಶ್ರಿತರಿಗಾಗಿ ರಾಧಿಕಾ ಅವರು ಪ್ರೀತಿಯಿಂದ ತಂದಿದ್ದ ಹಣ್ಣು ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ನೀಡಲಾಗಿದ್ದು, ಅವನ್ನೆಲ್ಲಾ ಪಡೆದು ಸದ್ಯ ನಿರಾಶ್ರಿತರು ಶಾಂತವಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ನಿರಾಶ್ರಿತರ ಹಠವಾದಿತನವನ್ನು ಲೇಡಿ ಸಿಂಗಂ ಅವರ ಮನಗೆಲ್ಲುವ ಮೂಲಕ ಲಾಠಿ ಹಿಡಿಯುವ ಕೈಯಲ್ಲಿ ಜನರ ಮನಗೆಲ್ಲುವ ಶಕ್ತಿ ಕೂಡ ಇರುತ್ತದೆ ಅನ್ನೋದನ್ನು ಸಾಬೀತು ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *