ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಜನಸಮಾನ್ಯರಿಗೆ ಅಪಘಾತವಾದ್ರೆ, ಮಾರ್ಗಮಧ್ಯೆ ವಾಹನ ಕೆಟ್ಟು ನಿಂತಾಗ ಸಹಾಯ ಮಾಡುವವರೇ ಕಡಿಮೆಯಾಗಿದ್ದಾರೆ. ಆದರೆ ಎಸ್‍ಪಿ ಅಣ್ಣಾಮಲೈ ಅವರು ಕೈಯಲ್ಲಿ ಸ್ಪ್ಯಾನರ್ ಹಿಡಿದು ಕೆಟ್ಟುನಿಂತ ವಾಹನ ರಿಪೇರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಬೆಂಗಳೂರಿನ ಕಾರೊಂದು ಪಂಚರ್ ಆಗಿ ರಸ್ತೆ ಮಧ್ಯೆಯೇ ನಿಂತು ಹೋಗಿತ್ತು. ಈ ಸಂದರ್ಭದಲ್ಲಿ ಸ್ವತಃ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಕೈಯಲ್ಲಿ ಸ್ಪ್ಯಾನರ್ ಹಿಡಿದು ಸಹಾಯ ಮಾಡುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರಿನಿಂದ ಪ್ರವಾಸಿಗರು ಕಾರಿನಲ್ಲಿ ಭಾನುವಾರ ರಾತ್ರಿ ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಮತ್ತಾವರ ಗ್ರಾಮದ ಬಳಿ ಕಾರು ಪಂಚರ್ ಆಗಿ ನಿಂತಿತ್ತು. ರಸ್ತೆಯ ಸುತ್ತಾಮುತ್ತಾ ಮರಗಳಿದ್ದರಿಂದ ಪ್ರವಾಸಿಗರು ಭಯದಲ್ಲಿದ್ದರು. ಈ ವೇಳೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಎಸ್‍ಪಿ ಅಣ್ಣಾಮಲೈ ಸ್ವತಃ ತಾವೇ ಕೈಯಲ್ಲಿ ಸ್ಪ್ಯಾನರ್ ಹಿಡಿದು ಟಯರ್ ಬಿಚ್ಚಲು ಯತ್ನಿಸಿದ್ದಾರೆ.
ಟಯರ ಬಿಚ್ಚಲು ಸಾಧ್ಯವಾಗದ ವೇಳೆಯಲ್ಲಿ ಮೆಕಾನಿಕ್‍ಗೆ ಫೋನ್ ಮಾಡಿ ಬರುವಂತೆ ತಿಳಿಸಿದ್ದಾರೆ. ನಂತರ ಕಾರಿನಲ್ಲಿದ್ದ ಪ್ರವಾಸಿಗರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ನಗರಕ್ಕೆ ತಂದು ಬಿಟ್ಟಿದ್ದಾರೆ. ಎಸ್‍ಪಿ ಸಹಾಯ ಕಂಡು ಕಾರು ಮಾಲೀಕ ಆಶ್ಚರ್ಯಪಟ್ಟು ಎಸ್‍ಪಿ ಈ ರೀತಿಯ ಸಹಾಯ ಮಾಡಿದ್ದು ತುಂಬಾ ಖುಷಿ ಆಯಿತು ಎಂದು ಹೇಳಿದರು.