5 ಮರಿಗಳಿಗೆ ಜನ್ಮ ನೀಡಿದ ಗಾಮಿನಿ – ಕುನೋದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆ

Public TV
2 Min Read

ಭೋಪಾಲ್‌: ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 5 ವರ್ಷದ ಚೀತಾ (African Cheetah) 5 ಮರಿಗಳಿಗೆ ಜನ್ಮ ನೀಡಿದ್ದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇದರಲ್ಲಿ ಭಾರತದಲ್ಲಿ ಜನಿಸಿದ 13 ಮರಿಗಳೂ ಸೇರಿವೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ (Bhupendra Yadav) ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ, ಸುಮಾರು 5 ವರ್ಷ ಪ್ರಾಯದ ಹೆಣ್ಣು ಚೀತಾ ಗಾಮಿನಿ ಭಾನುವಾರ 5 ಮರಿಗಳಿಗೆ (Cheetah Cubs) ಜನ್ಮ ನೀಡಿದ್ದು, ಭಾರತದಲ್ಲಿ ಜನಿಸಿದ ಚೀತಾ ಮರಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ಚೀತಾವನ್ನು ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಪ್ರದೇಶದಿಂದ ತರಲಾಗಿತ್ತು ಎಂದು ತಿಳಿಸಿದ್ದಾರೆ.

ಇಲ್ಲಿನ ಅರಣ್ಯಾಧಿಕಾರಿಗಳು (Forest Officers), ಪಶು ವೈದ್ಯರು ಹಾಗೂ ರಕ್ಷಣಾ ಸಿಬ್ಬಂದಿ ತಂಡವು ಚೀತಾಗಳಿಗೆ ಒತ್ತಡ ರಹಿತ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ಚೀತಾಗಳ ಜನನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದೀಗ ಕುನೋದಲ್ಲಿ ಒಟ್ಟು ಚೀತಾಗಳ ಸಂಖ್ಯೆ 26 ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!

ಇದಕ್ಕೂ ಮುನ್ನ ಜ್ವಾಲಾ ಎಂಬ ಚೀತಾ ಕಳೆದ ಜನವರಿ 20 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆಶಾ ಹೆಸರಿನ ಮತ್ತೊಂದು ಚೀತಾ ಅದೇ ತಿಂಗಳ ಆರಂಭದಲ್ಲಿ 3 ಮರಿಗಳಿಗೆ ಜನ್ಮ ನೀಡಿತು.

1952 ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಗಿತ್ತು. ಆ ನಂತರ ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ಚೀತಾಗಳನ್ನು ಎರಡು ಬ್ಯಾಚ್‌ಗಳಲ್ಲಿ ಆಮದು ಮಾಡಿಕೊಳ್ಳಲಾಯಿತು. 2022 ರಲ್ಲಿ ನಮೀಬಿಯಾದಿಂದ ಮೊದಲ ಬ್ಯಾಚ್‌ ಅನ್ನು ಆಮದು ಮಾಡಿಕೊಳ್ಳಲಾಗಿತ್ತು. ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.

ಆರಂಭದ ಒಂದು ವರ್ಷದ ಅವಧಿಯಲ್ಲಿ ಸುಮಾರು 10 ಚೀತಾಗಳು ಸಾವಿಗೀಡಾಗಿದ್ದವು. ಆದ್ರೆ ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳಲ್ಲೇ 12 ಮರಿಗಳ ಜನನವಾಗಿದ್ದು, ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವರ್ಷದಿಂದಲೇ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಸಫಾರಿ ಆರಂಭಿಸುವ ಬಗ್ಗೆಯೂ ಅಧಿಕಾರಿಗಳು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಮಲಗಿದ್ದ ವ್ಯಾಪಾರಿ; ಆಚೆಗೆಳೆದು 35 ಸುತ್ತು ಗುಂಡು ಹಾರಿಸಿ ಕೊಂದ ದುರುಳರು!

Share This Article