– ಮತ್ತೊಮ್ಮೆ ತೂಫಾನ್ ಶತಕ, 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಎಬಿಡಿ
South Africa Vs Pakistan – ಎಬಿ ಡಿ ವಿಲಿಯರ್ಸ್ ಅವರ ಅಭೂತಪೂರ್ವ ಬ್ಯಾಟಿಂಗ್‌ನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡ ವಿಶ್ವ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ (WCL 2025) ಟ್ರೋಫಿಯನ್ನು ಗೆದ್ದುಕೊಂಡಿದೆ. ಸ್ನಾಯು ಸೆಳೆತದ ಸಮಸ್ಯೆಯ ಮಧ್ಯೆಯೂ 48 ಎಸೆತಗಳಲ್ಲಿ ಶತಕ ಸಿಡಿಸಿದ ಅವರು, ಅಜೇಯ 120 ರನ್ ಗಳಿಸುವ ಮೂಲಕ ಏಕಾಂಗಿಯಾಗಿ ತಂಡವನ್ನು ದಡ ಸೇರಿಸಿದರು.
ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂ ನಗರದ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳ ಅಂತರದಿಂದ ಜಯಿಸುವ ಮೂಲಕ ಹಿರಿಯರ ಲೀಗ್‌ನ ಟೂರ್ನಿಯಲ್ಲಿ ಜಯಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಗೆಲುವಿಗೆ ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 3.1 ಓವರ್‌ಗಳು ಬಾಕಿ ಇರುಬಾಗಲೇ ಈ ಗುರಿ ತಲುಪಿತು. ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ವಿಲಿಯರ್ಸ್ ಅವರ ಅದ್ಭುತ ಫೀಲ್ಡಿಂಗ್‌ನಿಂದ ದಕ್ಷಿಣ ಆಫ್ರಿಕಾ 1 ರನ್‌ನಿಂದ ರೋಚಕ ಜಯ ಗಳಿಸಿತ್ತು.
ಎಬಿಡಿ ಅಬ್ಬರ ಹೀಗಿತ್ತು
ದಕ್ಷಿಣ ಆಫ್ರಿಕಾದ ವೈಟ್ ಬಾಲ್ ಕ್ರಿಕೆಟ್ ದಂತಕತೆಯಾಗಿರುವ ಎಬಿ ಡಿ ವಿಲಿಯರ್ಸ್ ಪಾಕ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 60 ಎಸೆತಗಳಲ್ಲಿ ಅಜೇಯ 120 ರನ್ ಗಳಿಸಿದರು. ಇದಕ್ಕೂ ಮೊದಲು ಅವರು ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಸ್ಫೋಟಕ ಇನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ಗಳಿದ್ದವು.
ಡಿ ವಿಲಿಯರ್ಸ್ ಆಟದ ನಡುವೆ ನೋವಿನಿಂದ ಬಳಲುತ್ತಿದ್ದು ಸ್ಫಷ್ಟವಾಗಿ ಗೋಚರಿಸಿತ್ತು. ಆದರೂ ಧೃತಿಗೆಡದ ಅವರು ವೈದ್ಯಕೀಯ ಸಹಾಯವನ್ನು ಪಡೆದು ಆಟವನ್ನು ಮುಂದುವರಿಸಿದರು. ಅವರೊಂದಿಗೆ ಕಣಕ್ಕಿಳಿದ ಮತ್ತೊಬ್ಬ ಆರಂಭಿಕ ಆಟಗಾರ ಹಶೀಂ ಆಮ್ಲ 14 ಎಸೆತಗಳಲ್ಲಿ 18 ರನ್ ಗಳಿಸಿ ಸ್ಪಿನ್ನರ್ ಸಯೀದ್ ಅಜ್ಮಲ್ ಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂದಲ್ಲಿ ಕ್ರೀಸಿಗೆ ಆಗಮಿಸಿದ ಜೆಪಿ ಡುಮಿನಿ 28 ಎಸೆತಗಳಲ್ಲಿ 50 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ವಿಲಿಯರ್ಸ್ ಮತ್ತು ಡುವಿಮಿ 125 ರನ್ ಗಳ ಜೊತೆಯಾಟವಾಡಿದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಚಾಂಪಿಯನ್ಸ್ 20 ಓವರ್ ಗಳಲ್ಲಿ 195/5, ಶಾರ್ಜಿಲ್ ಖಾನ್ 76(44), ಉಮರ್ ಅಮೀನ್ 36(19), ಆಲಿಫ್ ಅಲಿ 28(15), ವಿಜೋಯಿನ್ 38ಕ್ಕೆ 2, ಪಾರ್ನೆಲ್ 32ಕ್ಕೆ 2.
ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ 16.5 ಓವರ್ ಗಳಲ್ಲಿ 197, ಎಬಿ ಡಿ ವಿಲಿಯರ್ಸ್ ಅಜೇಯ 120(60), ಜೆಪಿ ಡುಮಿನಿ ಅಜೇಯ 50(28) ಹಾಶಿಂ ಆಮ್ಲಾ 18(14).